ಹಕ್ಕಿಗಳಿಗೆ ನೀರುಣಿಸುವ ಮಡಿಕೆಗೂ ಕೇಸರಿ ಬಣ್ಣ : ರಾಜಸ್ಥಾನ ಸರಕಾರದ ವಿರುದ್ಧ ತೀವ್ರ ಟೀಕೆ

ಜೈಪುರ, ಮೇ 12: ಹಕ್ಕಿಗಳ ಬಾಯಾರಿಕೆ ತಣಿಸಲು ರಾಜಸ್ಥಾನ ಸರಕಾರ ಕೇಸರಿ ಬಣ್ಣ ಲೇಪಿಸಿದ ನೀರಿನ ಮಡಕೆಗಳನ್ನು ತೂಗು ಹಾಕಿದೆ. ಆದರೆ, ಈ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಇದು ಸರಕಾರದ ಕೇಸರೀಕರಣದ ನಡೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ನಗರದ ಜವಾಹರ್ ಸರ್ಕಲ್‌ನಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೆ ಶನಿವಾರ ಮಣ್ಣಿನ ಮಡಕೆಗಳನ್ನು ಅಳವಡಿಸುವ ಮೂಲಕ ನೂತನ ಅಭಿಯಾನ ಆರಂಭಿಸಿದರು. ಬಿಜೆಪಿಯ ಚುನಾವಣಾ ಚಿಹ್ನೆ ತಾವರೆಯ ಚಿಹ್ನೆ ಹೊಂದಿರುವ ಕುಡಿಯುವ ನೀರಿನ ಯಂತ್ರವನ್ನು ಕೂಡ ಅವರು ಉದ್ಘಾಟಿಸಿದರು. ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳಿವೆ. ಆದುದರಿಂದ ಮಡಿಕೆಗಳ ಬಣ್ಣದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ವರ್ಷಗಳ ಹಿಂದೆ, ಮಕ್ಕಳು ಶಾಲೆ ತ್ಯಜಿಸುವುದನ್ನು ಕಡಿಮೆ ಮಾಡುವ ಕ್ರಮವಾಗಿ ರಾಜಸ್ಥಾನದ ಬಿಜೆಪಿ ಸರಕಾರ ಶಾಲಾ ವಿದ್ಯಾರ್ಥಿನಿಯರಿಗೆ ಕೇಸರಿ ಬಣ್ಣ ಬಳಿದ ಸೈಕಲ್‌ಗಳನ್ನು ನೀಡಿತ್ತು. ಈ ಕ್ರಮವನ್ನು ಕಾಂಗ್ರೆಸ್ ಸರಕಾರ, ಇದು ಶಿಕ್ಷಣದ ‘ಕೇಸರೀಕರಣ’ ಎಂದು ಟೀಕಿಸಿತ್ತು.
ಜನರು ಹಾಗೂ ಹಕ್ಕಿಗಳಿಗೆ ನೀರು ಒದಗಿಸುವ ಈ ಯೋಜನೆಯನ್ನು ಶೀಘ್ರದಲ್ಲಿ ಜೈಪುರದಿಂದ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ರಾಜಸ್ಥಾನದ ಆರೋಗ್ಯ ಸಚಿವ ಕಾಳಿಚರಣ್ ಸರಫ್ ಹೇಳಿದ್ದಾರೆ. ನಗರದ 91 ವಾರ್ಡ್‌ಗಳಲ್ಲಿ ಈ ಕುಡಿಯುವ ನೀರಿನ ವ್ಯವಸ್ಥೆ ಅಸ್ತಿತ್ವಕ್ಕೆ ಬರಲಿದೆ ಎಂದು ಜೈಪುರದ ಮೇಯರ್ ಅಶೋಕ್ ಲಾಹೋಟಿ ತಿಳಿಸಿದ್ದಾರೆ. ಆದರೆ, ಮಡಿಕೆಯ ಬಣ್ಣದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ.





