ಮಂಡ್ಯದಲ್ಲಿ ಶೇ.78 ರಷ್ಟು ಮತದಾನ: ಅಲ್ಲಲ್ಲಿ ಲಘು ಲಾಠಿ ಪ್ರಹಾರ, ಮತಯಂತ್ರದಲ್ಲಿ ದೋಷ

ಮಂಡ್ಯ, ಮೇ 12: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಲಘುಲಾಠಿ ಪ್ರಹಾರ, ಮತಯಂತ್ರಗಳ ದೋಷದಂತಹ ಕೆಲವು ಘಟನೆಗಳನ್ನು ಹೊರತುಪಡಿಸಿದಂತೆ ಸುಮಾರು ಶೇ.78 ರಷ್ಟು ಮತದಾನ ನಡೆದಿದೆ.
ಹಲವು ಮತಗಟ್ಟೆಗಳಲ್ಲಿ ಮತಯಂತ್ರಗಳ ತಾಂತ್ರಿಕ ದೋಷದಿಂದ ಗರಿಷ್ಠ ಒಂದು ತಾಸು ಮತದಾನ ವಿಳಂಬವಾಯಿತು. ಮತಯಂತ್ರಗಳ ಸರಿಪಡಿಸುವವರೆಗೆ ಮತದಾರರು ಕಾದು ಕುಳಿತರು. ಏಳು ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ಇರುವ ಹಿನ್ನೆಲೆಯಲ್ಲಿ ಕೆಲವು ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದ್ದರಿಂದ ಪೊಲೀಸರು ಲಾಠಿ ಬೀಸಿ ಗುಂಪನ್ನು ಚದುರಿಸಿದರು. ಪಕ್ಷಗಳ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಅಭಿಮಾನಿಗಳು ಬೆಳಗ್ಗೆಯೇ ಮತಗಟ್ಟೆಗಳತ್ತ ಗುಂಪಾಗಿ ಸಾಗಿದರೆ, ಮತದಾರರು ಸಂಖ್ಯೆ ವಿರಳವಾಗಿತ್ತು. ಕ್ರಮೇಣ ವೇಗ ಪಡೆದುಕೊಳ್ಳತೊಡಗಿತು.
ಮಧ್ಯಾಹ್ನ ಒಂದು ಗಂಟೆ ವೇಳೆಗೆ ಶೇ.37.44ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದರೆ, 3 ಗಂಟೆ ವೇಳೆಗೆ ಅರ್ಧದಷ್ಟು ಅಂದರೆ, ಶೇ.51ರಷ್ಟು ಮತದಾರರು ಮತ ಹಾಕಿದರು. ನಂತರ ಮತ್ತಷ್ಟು ವೇಗ ಪಡೆದುಕೊಂಡು ಸಂಜೆ 5ರ ವೇಳೆಗೆ ಶೇ.74 ಮತದಾರರು ಮತಹಾಕಿದರು.
ಕಟ್ಟುನಿಟ್ಟಿನ ಕ್ರಮವಹಿಸಿದ್ದರೂ ಹಲವು ಮತಗಟ್ಟೆಗಳ ಬಳಿ ಕಾರ್ಯಕರ್ತರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಅಂತಿಮ ಗಳಿಗೆಯಲ್ಲಿ ಮತ ಯಾಚಿಸುತ್ತಿದ್ದುದು ಕಂಡುಬಂತು. ಸೂಕ್ತ ಬಂದೋಬಸ್ತ್ ಇದ್ದ ಕಾರಣ ಅಹಿತಕರ ಘಟನೆಗೆ ಆಸ್ಪದವಾಗಲಿಲ್ಲ.
ಅಕ್ಕಪಕ್ಕದ ಗ್ರಾಮಗಳ ಮತದಾರರನ್ನು ಆಟೋ, ದ್ವಿಚಕ್ರ ವಾಹನಗಳಲ್ಲಿ ಕರೆದುಕೊಂಡು ಬಂದು ಮತ ಹಾಕಲು ಅಭ್ಯರ್ಥಿಗಳ ಬೆಂಬಲಿಗರು ಸಹಕರಿಸಿದರೆ, ಮತಗಟ್ಟೆ ಬಳಿ ವಿಕಲಚೇತನರಿಗೆ ವ್ಹೀಲ್ ಚೇರ್ ಗಳ ಬಳಕೆ ಸಹಕಾರಿಯಾಯಿತು. ಇನ್ನು ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಚುನಾವಣೆಗೆ ಸ್ಪರ್ಧಿಸಿರುವ ಪ್ರಮುಖ ಹುರಿಯಾಳುಗಳು ತಮ್ಮ ಕ್ಷೇತ್ರದ ವ್ಯಾಪ್ತಿಯ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನದ ಪರಿಸ್ಥಿತಿ ಅವಲೋಕಿಸಿದರು.
ಪರ-ವಿರುದ್ಧ ಘೋಷಣೆ: ನಾಗಮಂಗಲ ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಮರಳಿಗ, ಕೀಳಘಟ್ಟ, ಆಬಲವಾಡಿ ಮತ್ತು ದೊಡ್ಡ ಹೊಸಗಾವಿ ಗ್ರಾಮಗಳಿಗೆ ಭೇಟಿ ನೀಡಿದ್ದಾಗ ಕಾಂಗ್ರೆಸ್ ಕಾರ್ಯಕರ್ತರು ಚಲುವರಾಯಸ್ವಾಮಿ ಪರವಾಗಿ, ಜೆಡಿಎಸ್ ಕಾರ್ಯಕರ್ತರು ವಿರುದ್ಧವಾಗಿ ಘೋಷಣೆ ಕೂಗಿದಾಗ ಸ್ವಲ್ಪ ಸಮಯ ಗೊಂದಲ ನಿರ್ಮಾಣವಾಗಿತ್ತು.
ಮಹಿಳಾ ಮತದಾರರ ತಮ್ಮ ಹಕ್ಕು ಚಲಾಯಿಸಲು ಚುನಾವಣಾ ಆಯೋಗ ಜಿಲ್ಲೆಯ 22 ಕಡೆ ನಿರ್ಮಿಸಿದ್ದ ಪಿಂಕ್ ಮತಗಟ್ಟೆಗಳಿಗೆ ಮತದಾನಕ್ಕೆ ಆಗಮಿಸಿದ ಮಹಿಳೆಯರಿಗೆ ಸಿಬ್ಬಂದಿ ಗುಲಾಬಿ ಹೂವು, ಬಳೆ ನೀಡಿ ಸ್ವಾಗತಿಸುತ್ತಿರುವುದು ವಿಶೇಷವಾಗಿತ್ತು.
ಮೇಲುಕೋಟೆ ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಕ್ಯಾತನಹಳ್ಳಿಯಲ್ಲಿ, ಜೆಡಿಎಸ್ ಅಭ್ಯರ್ಥಿ ಸಂಸದ ಸಿ.ಎಸ್.ಪುಟ್ಟರಾಜು ಚಿನಕುರಳಿಯಲ್ಲಿ, ಮದ್ದೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಗುರುದೇವರಹಳ್ಳಿಯಲ್ಲಿ, ಜೆಡಿಎಸ್ ಅಭ್ಯರ್ಥಿ ಡಿ.ಸಿ.ತಮ್ಮಣ್ಣ ದೊಡ್ಡರಸಿನಕೆರೆಯಲ್ಲಿ, ನಾಗಮಂಗಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಜ್ಜಲಘಟ್ಟದಲ್ಲಿ, ಜೆಡಿಎಸ್ ಅಭ್ಯರ್ಥಿ ನಾಗಮಂಗಲದಲ್ಲಿ ತಮ್ಮ ಕುಟುಂಬದವರ ಜತೆ ಮತ ಚಲಾಯಿಸಿದರು.
ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಶಿವಣ್ಣ ಹನಕೆರೆಯಲ್ಲಿ, ಬಿಜೆಪಿ ಅಭ್ಯರ್ಥಿ ಎನ್.ಶಿವಣ್ಣ ಚಂದಗಾಲುವಿನಲ್ಲಿ, ಪಕ್ಷೇತರ ಅಭ್ಯರ್ಥಿಗಳಾದ 5 ರೂ. ಖ್ಯಾತಿಯ ವೈದ್ಯ ಡಾ.ಶಂಕರೇಗೌಡ ಮತ್ತು ಹೋರಾಟಗಾರ ಎಂ.ಬಿ.ನಾಗಣ್ಣಗೌಡ ಮಂಡ್ಯದಲ್ಲಿ, ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮೇಶ್‍ಬಾಬು, ಜೆಡಿಎಸ್ ಅಭ್ಯರ್ಥಿ ರವೀಂದ್ರ ಅರಕೆರೆಯಲ್ಲಿ, ಬಿಜೆಪಿ ಅಭ್ಯರ್ಥಿ ಕೆ.ಎಸ್.ನಂಜುಂಡೇಗೌಡ ಕಡತನಾಳುವಿನಲ್ಲಿ, ಮಳವಳ್ಳಿಯ ಕಾಂಗ್ರೆಸ್ ಅಭ್ಯರ್ಥಿ ಪಿ.ಎನ್.ನರೇಂದ್ರಸ್ವಾಮಿ ಪೂರಿಗಾಲಿಯಲ್ಲಿ, ಜೆಡಿಎಸ್ ಅಭ್ಯರ್ಥಿ ಡಾ.ಅನ್ನದಾನಿ ಹುಸ್ಕೂರಿನಲ್ಲಿ, ಬಿಜೆಪಿ ಅಭ್ಯರ್ಥಿ ಬಿ.ಸೋಮಶೇಖರ್ ಹೊಸಹಳ್ಳಿಯಲ್ಲಿ, ಕೆ.ಆರ್.ಪೇಟೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಮತ್ತು ಜೆಡಿಎಸ್ ಅಭ್ಯರ್ಥಿ ಕೆ.ನಾರಾಯಣಗೌಡ ಕೆ.ಆರ್.ಪೇಟೆ ಪಟ್ಟಣದಲ್ಲಿ ಮತ ಹಾಕಿದರು.







