ರಾಹುಲ್ ರ ‘ಯುಕ್ತ’ ಪ್ರಶ್ನೆಗೆ ಉತ್ತರಿಸುವ ಬದಲು ಗಮನ ತಿರುಗಿಸುವ ರಾಜಕೀಯದಲ್ಲಿ ಮೋದಿ : ಶತ್ರುಘ್ನ ಸಿನ್ಹಾ ಟೀಕೆ

ಪಾಟ್ನಾ, ಮೇ 12: ಭಾರತದ ಪ್ರಧಾನಿ ಆಗಲು ತಾನು ಸಿದ್ಧ ಎಂದು ಹೇಳಿರುವ ರಾಹುಲ್ ಗಾಂಧಿ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿರುವುದನ್ನು ಬಿಜೆಪಿಯ ಅತೃಪ್ತ ಸಂಸದ ಶತ್ರುಘ್ನ ಸಿನ್ಹಾ ಪ್ರಶ್ನಿಸಿದ್ದಾರೆ ಹಾಗೂ ಕಾಂಗ್ರೆಸ್ ಅಧ್ಯಕ್ಷರು ಎತ್ತಿದ ‘ಯುಕ್ತ’ ಪ್ರಶ್ನೆಗೆ ಉತ್ತರಿಸುವ ಬದಲು ಮೋದಿ ಅವರು ‘ಗಮನ ತಿರುಗಿಸುವ ರಾಜಕೀಯ’ದಲ್ಲಿ ತೊಡಗಿದ್ದಾರೆ ಎಂದಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ರಾಜಕೀಯದಲ್ಲಿದ್ದು ಪ್ರಬುದ್ಧರಾಗಿರುವ ಕಾಂಗ್ರೆಸ್‌ನ ಅಧ್ಯಕ್ಷರು ಜನ ಸಮೂಹದಲ್ಲಿ ಜನಪ್ರಿಯರಾಗಿದ್ದಾರೆ ಎಂದು ಅವರು ಹೇಳಿದರು ಹಾಗೂ ಅತಿ ಹಳೆಯ ಹಾಗೂ ಅತಿ ದೊಡ್ಡ ರಾಷ್ಟ್ರೀಯ ಪಕ್ಷವೊಂದರ ನಾಯಕ ಮುಂದಿನ ಪ್ರಧಾನಿ ಆಗುತ್ತೇನೆ ಎಂದು ಹೇಳಿದರೆ ತಪ್ಪೇನು ಎಂದು ಅವರು ಪ್ರಶ್ನಿಸಿದರು.
‘‘ಸ್ಥಾನ ಹಾಗೂ ಬೆಂಬಲವಿದ್ದರೆ ಈ ದೇಶದಲ್ಲಿ ಯಾರು ಬೇಕಾದರೂ ಪ್ರಧಾನಿ ಆಗಬಹುದು. ನಾಮ್ದಾರ್, ಕಾಮ್ದಾರ್, ದಾಮ್ದಾರ್ ಅಥವಾ ಸಾಮಾನ್ಯ ಬುದ್ಧಿವಂತನೂ ಪ್ರಧಾನಿ ಆಗಬಹುದು’’ ಎಂದು ಅವರು ಹೇಳಿದರು. ‘‘ಇದಕ್ಕೆ ಕೋಲಾಹಲ ಎಬ್ಬಿಸುವ ಅಗತ್ಯತೆ ಏನು ? ಕೊನೆಗೂ ಇದು ಅವರು ಆಂತರಿಕ ವಿಚಾರ ಅಲ್ಲ ಹಾಗೂ ಬಹುಮತದ ಮೂಲಕ ಪ್ರಧಾನಮಂತ್ರಿ ಗಿರಿ ದೊರಕುತ್ತದೆ’’ ಎಂದು ಸರಣಿ ಟ್ವೀಟ್‌ನಲ್ಲಿ ಶತ್ರುಘ್ನ ಸಿನ್ಹ ಹೇಳಿದ್ದಾರೆ.
2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ, ತಾನು ಪ್ರಧಾನಿಯಾಗಲು ಸಿದ್ಧ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಹೇಳಿದ್ದರು. ಅವರ ಈ ಹೇಳಿಕೆ ಬಗ್ಗೆ ಮೋದಿ ಅವರು ವ್ಯಂಗ್ಯವಾಡಿದ್ದರು. ರಾಹುಲ್ ಅವರನ್ನು ಅಪ್ರಬುದ್ಧ ಹಾಗೂ ರಾಜವಂಶಸ್ಥ’’ ಎಂದು ಹೇಳಿದ್ದರು. ‘‘ನೀವು (ರಾಹುಲ್ ಗಾಂಧಿ) ನಾಮ್‌ದಾರ್ (ರಾಜವಂಶಸ್ಥ) ನಾನು ಕಾಮ್‌ದಾರ್ (ಸಾಮಾನ್ಯ ಕೆಲಸಗಾರ)’’ ಎಂದಿದ್ದರು.







