ಚಿಕ್ಕಮಗಳೂರು: ವಿವಿಧ ಪಕ್ಷಗಳ ಪ್ರಮುಖ ಅಭ್ಯರ್ಥಿಗಳಿಂದ ಮತದಾನ

ಚಿಕ್ಕಮಗಳೂರು, ಮೇ 12: ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿನ ವಿವಿಧ ಮತಗಟ್ಟೆಗಳಲ್ಲಿ ಕಾಂಗ್ರೆಸ್, ಬೆಜೆಪಿ, ಜೆಡಿಎಸ್ ಪಕ್ಷಗಳ ಪ್ರಮುಖ ಅಭ್ಯರ್ಥಿಗಳು ಶನಿವಾರ ಮುಂಜಾನೆ ಮತ ಚಲಾಯಿಸಿದರು.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ಎಲ್.ಶಂಕರ್ ಅವರು ಮೂಡಿಗೆರೆ ಮೀಸಲು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಬಣಕಲ್ ಪಟ್ಟಣದ ಮತಗಟ್ಟೆಯೊಂದರಲ್ಲಿ ಶನಿವಾರ ಬೆಳಗ್ಗೆ ಮತಚಲಾಯಿಸಿದರು. ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಸಿ.ಟಿ.ರವಿ ನಗರದ ಬಸವನಹಳ್ಳಿ ಶಾಲೆಯಲ್ಲಿನ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು. ಜೆಡಿಎಸ್ ಅಭ್ಯರ್ಥಿ ಬಿ.ಎಚ್.ಹರೀಶ್ ನಗರ ಸಮೀಪದ ಉದ್ದೇಬೋರನಹಳ್ಳಿ ಸರಕಾರಿ ಶಾಲೆಯ ಪತಗಟ್ಟೆಯಲ್ಲಿ ಮತಚಲಾಯಿಸಿದರು.
ಶೃಂಗೇರಿ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರು ಕೊಪ್ಪ ತಾಲೂಕಿನ ಖಾಂಡ್ಯ ಹೋಬಳಿಯ ಬಾಸಾಪುರ ಗ್ರಾಮದಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಜೀವರಾಜ್ ಎನ್.ಆರ್.ಪುರ ಪಟ್ಟಣದ ಮತಗಟ್ಟೆಯಲ್ಲಿ ಮತದಾನ ಮಾಡಿದರೆ ಜೆಡಿಎಸ್ ಅಭ್ಯರ್ಥಿ ಎಚ್.ಜಿ.ವೆಂಕಟೇಶ್ ಕೊಪ್ಪ ಪಟ್ಟಣದ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಮೂಡಿಗೆರೆ ಕ್ಷೇತ್ರದಲ್ಲಿ ಮಾಜಿ ಸಚಿವೆ ಮೋಟಮ್ಮ ಪಟ್ಟಣದ ಮತಗಟ್ಟೆ ಸಂಖ್ಯೆ 173ರಲ್ಲಿ ಶನಿವಾರ ಬೆಳಗ್ಗೆ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಎಂ.ಪಿ.ಕುಮಾರಸ್ವಾಮಿ ಪಟ್ಟಣದ 169ರ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಜೆಡಿಎಸ್ ಅಭ್ಯರ್ಥಿ ಬಿ.ಬಿ.ನಿಂಗಯ್ಯ ತಮ್ಮ ಸ್ವಗ್ರಾಮ ಬೆಟ್ಟಗೆರೆ ಗ್ರಾಮದ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ತರೀಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಶಿವಶಂಕರಪ್ಪ, ಕಾಂಗ್ರೆಸ್ ಅಭ್ಯರ್ಥಿ ಎಸ್.ಎಂ.ನಾಗರಾಜ್ ತರೀಕೆರೆ ಪಟ್ಟಣದ ತಾಲೂಕು ಪಂಚಾಯತ್ ಆವರಣದ ಮತಗಟ್ಟೆಯಲ್ಲಿ ಮತಚಲಾಯಿಸಿದರೆ, ಬಿಜೆಪಿ ಅಭ್ಯರ್ಥಿ. ಡಿ.ಎಸ್.ಸುರೇಶ್ ಸ್ವಗ್ರಾಮ ದೋರನಾಳು ಗ್ರಾಮದ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಇನ್ನು ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ವೈ.ಎಸ್.ದತ್ತ ಯಗಟಿ ಗ್ರಾಮದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಆನಂದ್ ಅಂದೇನಹಳ್ಳಿ ಗ್ರಾಮದಲ್ಲಿ ಹಾಗೂ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಕುಂದೂರು ಗ್ರಾಮದಲ್ಲಿ ಮತಚಲಾಯಿಸಿದರು.







