ಗೋವಾಕ್ಕೆ ಮುಖ್ಯಮಂತ್ರಿ ನೀಡಿ, ಇಲ್ಲವೇ ಸರಕಾರ ಹಿಂಪಡೆಯಿರಿ
ಅಮಿತ್ ಶಾಗೆ ಕಾಂಗ್ರೆಸ್ ಆಗ್ರಹ

ಪಣಜಿ,ಮೇ 12: ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ರವಿವಾರ ಗೋವಾ ರಾಜ್ಯಕ್ಕೆ ಭೇಟಿ ನೀಡಲಿರುವಂತೆಯೇ, ಶನಿವಾರ ಪ್ರತಿಪಕ್ಷ ಕಾಂಗ್ರೆಸ್ ಹೇಳಿಕೆಯೊಂದನ್ನು ನೀಡಿ, ಗೋವಾಗೆ ಮುಖ್ಯಮಂತ್ರಿಯೊಬ್ಬರನ್ನು ನೀಡಿ ಇಲ್ಲವೇ ಈ ಅಪ್ರಜಾತಾಂತ್ರಿಕವಾಗಿ ಆಯ್ಕೆಯಾದ ಸರಕಾರವನ್ನು ಹಿಂಪಡೆಯುವಂತೆ ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದೆ.
ಗೋವಾ ಕಾಂಗ್ರೆಸ್ ವಕ್ತಾರ್ ಯತೀಶ್ ನಾಯ್ಕಾ ಶನಿವಾರ ಪಣಜಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ರಾಜ್ಯದ ಜನತೆಯ ಇಚ್ಛೆಗೆ ವಿರುದ್ಧವಾಗಿ ಬಿಜೆಪಿ ನೇತೃತ್ವದ ಸರಕಾರವನ್ನು ಪ್ರತಿಷ್ಠಾಪಿಸಲಾಗಿತ್ತು ಎಂದು ಆರೋಪಿಸಿದರು.
‘‘ ಒಂದೋ ಶಾ ಅವರು ಗೋವಾಗೆ ಮುಖ್ಯಮಂತ್ರಿಯನ್ನು ನೀಡಬೇಕು ಅಥವಾ ಅಪ್ರಜಾತಾಂತ್ರಿಕವಾಗಿ ಸ್ಥಾಪನೆಯಾದ ಈ ಸರಕಾರವನ್ನು ಹಿಂಪಡೆಯಬೇಕು’’ ಎಂದು ಯತೀಶ್ ನಾಯ್ಕಾ ಆಗ್ರಹಿಸಿದರು. ಅನಾರೋಗ್ಯಪೀಡಿತ ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅವರ ಗೈರುಹಾಜರಿಯಿಂದಾಗಿ ರಾಜ್ಯ ಸರಕಾರಕ್ಕೆ ಗರಬಡಿದಂತಾಗಿದೆ ಹಾಗೂ ಆಡಳಿತದಲ್ಲಿ ಅರಾಜಕತೆಯುಂಟಾಗಿದೆಯೆಂದು ನಾಯ್ಕೆ ದೂರಿದರು.
ಆಡಳಿತದ ನಿಷ್ಕ್ರಿಯತೆಯಿಂದಾಗಿ ರಾಜ್ಯದ ಜನತೆ ಹತಾಶರಾಗಿದ್ದು, ಯಾವುದೇ ಸಂಪುಟ ಸಭೆಗಳು ನಡೆಯುತ್ತಿಲ್ಲವೆಂದು ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಿರೀಶ್ ಚೋಡಂಕರ್ ಆರೋಪಿಸಿದ್ದಾರೆ. ನಿಯಮಿತವಾಗಿ ವೈದ್ಯಕೀಯ ಬುಲೆಟನ್ ಹೊರಡಿಸುವ ಮೂಲಕ ಮುಖ್ಯಮಂತ್ರಿ ಪಾರಿಕ್ಕರ್ ಅವರ ಆರೋಗ್ಯದ ಕುರಿತು ಸ್ಪಷ್ಟ ಚಿತ್ರಣವನ್ನು ನೀಡಬೇಕೆಂದು ಅವರು ಆಗ್ರಹಿಸಿದರು.
‘‘ಪಾರಿಕ್ಕರ್ ಅವರ ಆರೋಗ್ಯದ ಕುರಿತು ವೈದ್ಯಕೀಯ ಬುಲೆಟಿನ್ ಹೊರಡಿಸಬೇಕೆಂದು ಕಾಂಗ್ರೆಸ್ ಪಕ್ಷವು ರಾಜ್ಯಪಾಲೆ ಮೃದುಲಾ ಸಿನ್ಹಾ ಅವರನ್ನು ಒತ್ತಾಯಿಸಿತ್ತಾದರೂ, ಅವರು ನಮ್ಮ ಬೇಡಿಕೆ ಬಗ್ಗೆ ಯಾವುದೇ ಆಸಕ್ತಿಯನ್ನು ತೋರಿಲ್ಲ’’ ಎಂದು ಗಿರೀಶ್ ಚೋಡಂಕರ್ ಆರೋಪಿಸಿದ್ದಾರೆ.







