ಚುನಾವಣಾ ಕೆಲಸ ಮಾಡುವುದು ಖುಷಿ ಎನಿಸುತ್ತದೆ: ಬಿಎಸ್‌ಎಫ್ ಯೋಧ ವಿಕಾಸ್
ಬೆಂಗಳೂರು, ಮೇ 12: ಶಾಂತಿಯುತ ಮತದಾನ ನಡೆಸುವ ಸಲುವಾಗಿ ಚುನಾವಣಾ ಆಯೋಗ ನಮ್ಮನ್ನು ನೇಮಕ ಮಾಡಿದೆ. ನಾವಿಲ್ಲಿ ಚುನಾವಣಾ ಕರ್ತವ್ಯ ಮಾಡುತ್ತಿರುವುದು ಖುಷಿ ಎನಿಸುತ್ತಿದೆ ಎಂದು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಗಡಿ ಭದ್ರತಾ ಪಡೆ ಸಿಬ್ಬಂದಿ ವಿಕಾಸ್ ತಮ್ಮ ಅನಿಸಿಕೆ ಹಂಚಿಕೊಂಡರು.
ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ದೇವನಗಹಳ್ಳಿ ನಗರದಲ್ಲಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಹರಿಯಾಣ ಮೂಲದ ವಿಕಾಸ್ ವಾರ್ತಾಭಾರತಿಯೊಂದಿಗೆ ಮಾತನಾಡುತ್ತಾ, ಕರ್ನಾಟಕದ ಅಸೆಂಬ್ಲಿ ಚುನಾವಣೆಯ ಅಂಗವಾಗಿ ನೇಮಕಗೊಂಡಿದ್ದೇವೆ. ಗಡಿಯಲ್ಲಿ ದೇಶ ಸೇವೆ ಮಾಡುವುದು ಎಷ್ಟು ಮುಖ್ಯವೋ, ದೇಶದೊಳಗೆ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಚುನಾವಣೆಗಳು ಪ್ರಜಾಪ್ರಭುತ್ವವನ್ನು ಕಾಪಾಡುತ್ತದೆ. ಹೀಗಾಗಿ, ನಮಗೆ ಇಲ್ಲಿ ಕೆಲಸ ಮಾಡುವುದು ಹೆಮ್ಮೆ ಎನ್ನಿಸುತ್ತದೆ ಎಂದು ಹೇಳಿದರು.
ದಿಲ್ಲಿಗೂ ಹಾಗೂ ಕರ್ನಾಟಕಕ್ಕೂ ವಾತಾವರಣದಲ್ಲಿ ತುಂಬಾ ವ್ಯತ್ಯಾಸಗಳಿವೆ. ಆದರೆ, ಅದನ್ನೆಲ್ಲಾ ಮೀರಿ ಕರ್ತವ್ಯ ನಿರ್ವಹಿಸುವುದು ನಮ್ಮ ಜವಾಬ್ದಾರಿ. ನಾವೆಲ್ಲೂ ಹತಾಶರಾಗಿಲ್ಲ. ಇಲ್ಲಿನ ಜನರು ಉತ್ತಮವಾದ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಯಾವುದೇ ಅಡೆತಡೆಗಳು ಇಲ್ಲದೆ ಚುನಾವಣೆ ನಡೆಸುವುದು ನಮ್ಮ ಗುರಿಯಾಗಿದೆ ಎಂದು ವಿವರಿಸಿದರು.





