ಆಸ್ಕರ್, ಪ್ರಮೋದ್, ಪೇಜಾವರ ಶ್ರೀ ಸಹಿತ ಗಣ್ಯರಿಂದ ಮತದಾನ

ಉಡುಪಿ, ಮೇ 12: ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಸೇರಿದಂತೆ ಗಣ್ಯರು ಉಡುಪಿ ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಇಂದು ಮತದಾನ ಮಾಡಿದರು.
ಆಸ್ಕರ್ ಫೆರ್ನಾಂಡಿಸ್ ಪತ್ನಿ ಬ್ಲೋಸಂ ಫೆರ್ನಾಂಡಿಸ್ ಜೊತೆ ಆಗಮಿಸಿ ಬೆಳಗ್ಗೆ 7ಗಂಟೆಗೆ ಅಜ್ಜರಕಾಡಿನ ವಿವೇಕಾನಂದ ಸರಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಪ್ರಥಮ ಮತವನ್ನು ಚಲಾಯಿಸಿದರು. ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಕಾಡಬೆಟ್ಟು ಟಿ.ಎ.ಪೈ ಮೋಡರ್ನ್ ಶಾಲೆಯಲ್ಲಿ ಮತದಾನ ಮಾಡಿದರು. ಕಾಸರಗೋಡಿನಿಂದ ಆಗಮಿಸಿದ ಪೇಜಾವರ ಸ್ವಾಮೀಜಿ ಅಪರಾಹ್ನ 1:45ರ ಸುಮಾರಿಗೆ ನಗರದ ನಾರ್ತ್ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು. ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರೂ ಇದೇ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದರು. ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಪಣಿಯಾಡಿ ಶ್ರೀಅನಂತೇಶ್ವರ ಶಾಲೆಯಲ್ಲಿ ತಮ್ಮ ಚಲಾಯಿಸಿದರು.
ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವ ರಾಜ್ ಹಾಗೂ ಅವರ ತಾಯಿ ಮಾಜಿ ಸಚಿವೆ ಮನೋರಮಾ ಮಧ್ವರಾಜ್ ಮಲ್ಪೆಶ್ರೀನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ರಘುಪತಿ ಭಟ್ ನಿಟ್ಟೂರು ಶಾಲೆಯ ಮತಗಟ್ಟೆಯಲ್ಲಿ ತಾಯಿ ಸರಸ್ವತಿ ಜೊತೆಗೆ ಬಂದು ಮತ ಚಲಾಯಿಸಿದರು.
ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆಗೆ ಪತ್ನಿ ದಕ್ಷ ವಿ.ಸೊರಕೆ, ಪುತ್ರ ದ್ವಿಶನ್ ವಿ.ಸೊರಕೆ, ಪುತ್ರಿ ದ್ವಿತಿ ಸೊರಕೆ ಸಹಿತವಾಗಿ ಆಗಮಿಸಿ ಮತದಾನ ಮಾಡಿದರು. ಉಡುಪಿ ಜಿಲ್ಲೆಯ ಏಕೈಕ ಮಹಿಳಾ ಅಭ್ಯರ್ಥಿಯಾಗಿರುವ ಕಾಪು ವಿಧಾನ ಸಭಾ ಕ್ಷೇತ್ರದ ಭಾರತೀಯ ಜನಶಕ್ತಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಉಚ್ಚಿಲ ಸರಸ್ವತಿ ಮಂದಿರ ಶಾಲೆಯ ಮತಗಟ್ಟೆಯಲ್ಲಿ ಮತ್ತು ಕಾಪು ಬಿಜೆಪಿ ಅಭ್ಯರ್ಥಿ ಲಾಲಾಜಿ ಆರ್. ಮೆಂಡನ್ ಕಾಪು ಮಾದರಿ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.
ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೋಪಾಲ್ ಭಂಡಾರಿ ಪತ್ನಿ ಪ್ರಕಾಶಿನಿ ಗೋಪಾಲ್ ಭಂಡಾರಿ ಜೊತೆ ಹೆಬ್ರಿಯ ಚಾರ ಗ್ರಾಮದಲ್ಲಿರುವ ಗಾಂಧಿನಗರ ಮತಗಟ್ಟೆಯಲ್ಲಿ, ಕುಂದಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಕೇಶ್ ಮಲ್ಲಿ ಪತ್ನಿ ಜೊತೆ ಕುಂದಾಪುರ ಅಂಕದಕಟ್ಟೆ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ಹಾಗೂ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಲಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು.
ಬೈಂದೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಕುಮಾರ್ ಶೆಟ್ಟಿ ಕೆರಾಡಿ ಗ್ರಾಪಂ ವ್ಯಾಪ್ತಿಯ ಬೆಳಾಲ ಮತಗಟ್ಟೆಯಲ್ಲಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೋಪಾಲ ಪೂಜಾರಿ ಕಟ್‌ಬೆಲ್ತೂರು ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೋಟತಟ್ಟು ಗ್ರಾಪಂ ಕಚೇರಿಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಜನರಲ್ಲಿ ಕಾಣುವ ಹುಮ್ಮಸ್ಸು ನೋಡುವಾಗ ಬಹುಮತದ ವಿಶ್ವಾಸವಿದೆ. ಉತ್ತಮವಾದ ಪ್ರತಿಕ್ರಿಯೆ ಜನರಿಂದ ದೊರಕಿದೆ. ರಾಜ್ಯದಲ್ಲಿ ಜನರು ರಾಹುಲ್ ಗಾಂಧಿಗೆ ದೊಡ್ಡ ಸ್ವಾಗತ ನೀಡಿದ್ದಾರೆ. ಅಲೆ- ಅಲೆಗಳಲ್ಲಿ ಜನ ಎದ್ದು ಬಂದಿ ದ್ದಾರೆ. ಸ್ಪಷ್ಟವಾದ ಮತವನ್ನು ಜನ ಕಾಂಗ್ರೆಸ್ಗೆ ಕೊಡುತ್ತಾರೆ. 1975ರಲ್ಲಿ ಇಡಿ ದೇಶದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತ್ತು. ಆದರೆ ಕರ್ನಾಟಕ ಮತ್ತು ಆಂದ್ರಪ್ರದೇಶದಲ್ಲಿ ಬಹುಮತ ಪಡೆದಿತ್ತು. ಇದು ಕರ್ನಾಟಕದ ಇತಿಹಾಸ.
- ಆಸ್ಕರ್ ಫೆರ್ನಾಂಡಿಸ್, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯರು.
ದೇಶಕ್ಕೆ ಒಳ್ಳೆಯದಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಗೌಪ್ಯವಾಗಿ ಮತದಾನ ಮಾಡಿದ್ದೇನೆ. ರಾಜ್ಯದಲ್ಲಿ ಯಾವ ಸರಕಾರ ಬರಬೇಕು ಎಂಬ ಭವಿಷ್ಯ ಹೇಳುವುದಿಲ್ಲ. ಅದೆಲ್ಲ ಜನರಿಗೆ ಬಿಟ್ಟದ್ದು. ದೇವರ ಮತ್ತು ಜನರ ಇಚ್ಛೆಯಂತೆ ಆಗುತ್ತದೆ. ಪ್ರತಿಯೊಬ್ಬರು ಮತದಾನ ಮಾಡಬೇಕು. ಇದು ರಾಷ್ಟ್ರೀಯ ಕರ್ತವ್ಯ
-ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ
ತಾಯಿಯ ಆಶೀರ್ವಾದ ಪಡೆದು ತಾಯಿ ಜೊತೆ ಬಂದು ಮತದಾನ ಮಾಡಿದ್ದೇನೆ. ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ವಿರೋಧ ಪಕ್ಷದ ಅಪಪ್ರಚಾರಕ್ಕೆ ಜನತೆ ಕಿವಿಗೊಟ್ಟಿಲ್ಲ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಮೋದಿ ಪ್ರಭಾವ ಯುವಕರ ಮೇಲೆ ಇದೆ. ಬೇರೆ ಯಾರ ಮೇಲೂ ಬೀರಿಲ್ಲ.
- ಪ್ರಮೋದ್ ಮಧ್ವರಾಜ್, ಜಿಲ್ಲಾ ಉಸ್ತುವಾರಿ ಸಚಿವ
ಕಾಪು ಕ್ಷೇತ್ರದಲ್ಲಿ ಯುವಕರು ಸಹಿತ ಸರ್ವಧರ್ಮದವರು ನನ್ನ ಅಭಿವೃದ್ಧಿ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಅಭಿವೃದ್ದಿಯ ಪರ ಮತ ಚಲಾಯಿಸಿ ನನ್ನನ್ನು ಗೆಲ್ಲಿಸಲಿದ್ದಾರೆ ಎಂಬ ನಂಬಿಕೆ ಇದೆ. ರಾಜ್ಯ ಸರಕಾರದ ಸಾಧನೆ ಮನೆಮನೆಗೆ ಮುಟ್ಟಿದೆ.
-ವಿನಯ ಕುಮಾರ್ ಸೊರಕೆ, ಕಾಪು ಕಾಂಗ್ರೆಸ್ ಅಭ್ಯರ್ಥಿ







