ಇಂದು ಬಲಿಷ್ಠ ಹೈದರಾಬಾದ್‌ಗೆ ಚೆನ್ನೈ ಎದುರಾಳಿ

ಪುಣೆ, ಮೇ 12: ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಪ್ಲೇ-ಆಫ್‌ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಉಳಿದಿರುವ ಮೂರೂ ಪಂದ್ಯಗಳನ್ನು ಗೆಲ್ಲಬೇಕಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ರವಿವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.
ಎರಡು ವರ್ಷಗಳ ನಿಷೇಧದಿಂದ ಟ್ವೆಂಟಿ-20 ಲೀಗ್‌ಗೆ ವಾಪಸಾಗಿದ್ದ ಎಂ.ಎಸ್. ಧೋನಿ ನೇತೃತ್ವದ ಚೆನ್ನೈ ತಂಡ ಮೊದಲ ಆರು ಪಂದ್ಯಗಳಲ್ಲಿ ಜಯ ಸಾಧಿಸಿ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿತ್ತು. ಮುಂಬೈ ವಿರುದ್ಧ ಸೋಲುವ ಮೂಲಕ ಹಿನ್ನಡೆ ಕಂಡಿತು.
ಚೆನ್ನೈ 11 ಪಂದ್ಯಗಳಲ್ಲಿ 14 ಅಂಕ ಗಳಿಸಿದ್ದು, ಮೂರು ಪಂದ್ಯಗಳಲ್ಲಿ ಒಂದರಲ್ಲಿ ಜಯ ಸಾಧಿಸುವ ಅಗತ್ಯವಿದೆ. ಕಳೆದ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ತಂಡ 2008ರ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಸೋತಿತ್ತು. ಹೀಗಾಗಿ ಪ್ಲೇ-ಆಫ್ ವಿಶ್ವಾಸಕ್ಕೆ ಧಕ್ಕೆ ಉಂಟಾಗಿತ್ತು.
ಚೆನ್ನೈ ತಂಡ ರಾಯಲ್ಸ್ ವಿರುದ್ಧ 4 ವಿಕೆಟ್‌ಗಳಿಂದ ಸೋತಿತ್ತು. ಕಳೆದ ಐದು ಪಂದ್ಯಗಳಲ್ಲಿ ರಾಯಲ್ಸ್ ಮೂರನೇ ಸೋಲು ಕಂಡಿತ್ತು. ಒಂದು ವೇಳೆ ಚೆನ್ನೈ ತಂಡ ಸನ್‌ರೈಸರ್ಸ್ ವಿರುದ್ಧ ಸೋತರೆ ತೀವ್ರ ಹಿನ್ನಡೆ ಅನುಭವಿಸಲಿದೆ. ರಾಜಸ್ಥಾನ ವಿರುದ್ಧದ ಪಂದ್ಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾಳ್ಮೆ ಕಳೆದುಕೊಂಡ ಧೋನಿ, 176 ರನ್ ಗಳಿಸಿದರೂ ಪಂದ್ಯ ಗೆಲ್ಲಲಾಗದೇ ಇರುವುದಕ್ಕೆ ಬೌಲರ್‌ಗಳ ವೈಫಲ್ಯವೇ ಕಾರಣ ಎಂದು ದೂರಿದರು.
ಚೆನ್ನೈಗೆ ಪ್ರತಿಬಾರಿಯೂ ನೆರವಿಗೆ ಧಾವಿಸುವ ಅನುಭವಿ ಬೌಲರ್ ಹರ್ಭಜನ್ ಸಿಂಗ್ 29 ರನ್‌ಗೆ 1 ವಿಕೆಟ್ ಕಬಳಿಸಿದರು. ಹೀಗಾಗಿ ಅವರು ನಾಲ್ಕು ಓವರ್ ಕೋಟಾ ಮುಗಿಸಲು ಸಾಧ್ಯವಾಗಲಿಲ್ಲ. ಚೆನ್ನೈ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದೆ. ಆಸ್ಟ್ರೇಲಿಯದ ಶೇನ್ ವಾಟ್ಸನ್, ಅಂಬಟಿ ರಾಯುಡು, ಸುರೇಶ್ ರೈನಾ, ನಾಯಕ ಧೋನಿ ಹಾಗೂ ವೆಸ್ಟ್‌ಇಂಡೀಸ್‌ನ ಡ್ವೇಯ್ನ್ ಬ್ರಾವೊ ಉತ್ತಮ ಫಾರ್ಮ್‌ನಲ್ಲಿದ್ದಾರೆ.ಚೆನ್ನೈಗೆ ಬೌಲರ್‌ಗಳ ಬೆಂಬಲದ ಅಗತ್ಯವಿದೆ. 18 ಅಂಕವನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಮೊದಲನೇ ಸ್ಥಾನ ಭದ್ರಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ. ಆರಂಭಿಕ ಆಟಗಾರ ಶಿಖರ್ ಧವನ್(290 ರನ್)ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ನಾಯಕ ವಿಲಿಯಮ್ಸನ್(493 ರನ್)ಟೂರ್ನಮೆಂಟ್ ಉದ್ದಕ್ಕೂ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಯೂಸುಫ್ ಪಠಾಣ್(186 ರನ್), ಮನೀಷ್ ಪಾಂಡೆ(184) ಹಾಗೂ ಶಾಕಿಬ್ ಅಲ್ ಹಸನ್(158) ಕಠಿಣ ಪರಿಸ್ಥಿತಿಯಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ.
ಸನ್‌ರೈಸರ್ಸ್ ಬೌಲಿಂಗ್ ವಿಭಾಗ ಸದೃಢವಾಗಿದೆ. ಭುವನೇಶ್ವರ್‌ಗೆ ಸಿದ್ದಾರ್ಥ್ ಕೌಲ್(13 ವಿಕೆಟ್), ಸಂದೀಪ್ ಶರ್ಮ, ಲೆಗ್ ಸ್ಪಿನ್ನರ್ ರಶೀದ್ ಖಾನ್(13) ಹಾಗೂ ಶಾಕಿಬ್ ಅಲ್ ಹಸನ್(12) ಸಾಥ್ ನೀಡುತ್ತಿದ್ದಾರೆ.







