ಮುಂಬೈ -ರಾಜಸ್ಥಾನ ರಾಯಲ್ಸ್ ಗೆ ಪ್ರಮುಖ ಪಂದ್ಯ
ಮುಂಬೈ, ಮೇ 12: ಹ್ಯಾಟ್ರಿಕ್ ಗೆಲುವಿನಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ತಂಡ ರವಿವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸ ಲಿದೆ. ಪ್ಲೇ-ಆಫ್ ಅವಕಾಶ ಹೆಚ್ಚಿ ಸಿಕೊಳ್ಳಲು ಉಭಯ ತಂಡಗಳಿಗೆ ಈ ಪಂದ್ಯ ಅತ್ಯಂತ ಪ್ರಮುಖವಾಗಿದೆ.
ಟೂರ್ನಮೆಂಟ್‌ನ ಆರಂಭದಲ್ಲಿ ಸತತ ಸೋಲಿನಿಂದ ಕಂಗಾಲಾಗಿದ್ದ ರೋಹಿತ್ ಶರ್ಮ ನಾಯಕತ್ವದ ಮುಂಬೈ ತಂಡ ಇದೀಗ ಗೆಲುವಿನ ಹಳಿಗೆ ಮರಳಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸತತ ಗೆಲುವು ಅದರಲ್ಲೂ ಕೋಲ್ಕತಾದಲ್ಲಿ ಗಳಿಸಿದ 102 ರನ್ ಜಯ ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.
ಭಾರೀ ಅಂತರದ ಗೆಲುವಿನಿಂದಾಗಿ ಮುಂಬೈ 11 ಪಂದ್ಯಗಳಲ್ಲಿ 10 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.
ರಾಜಸ್ಥಾನ ರಾಯಲ್ಸ್ ತಂಡ ಕೂಡ 11 ಪಂದ್ಯಗಳಲ್ಲಿ 10 ಅಂಕ ಗಳಿಸಿದೆ. ಉಭಯ ತಂಡಗಳು ರವಿವಾರ ಮಾಡು-ಇಲ್ಲವೇ-ಮಡಿ ಪಂದ್ಯವನ್ನು ಆಡಲಿವೆ. ರವಿವಾರ ಇಲ್ಲಿ ಸೋಲುವ ತಂಡ ಪ್ಲೇ-ಆಫ್ ರೇಸ್‌ನಿಂದ ಹೊರಗುಳಿಯಲಿದೆ.
ಮುಂಬೈ ಪರ ಎವಿನ್ ಲೂವಿಸ್ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಶ್ರೇಷ್ಠ ಫಾರ್ಮ್‌ನಲ್ಲಿದ್ದಾರೆ. ಮುಂಬೈಗೆ ಪ್ರತಿಬಾರಿಯೂ ಉತ್ತಮ ಆರಂಭ ನೀಡುತ್ತಿದ್ದಾರೆ. ಆದರೆ,ಅವರಿಗೆ ಲೂವಿಸ್‌ರಿಂದ ಸರಿಯಾದ ಸಾಥ್ ಸಿಗುತ್ತಿಲ್ಲ.
ನಾಯಕ ರೋಹಿತ್ ವಾಂಖೆಡೆ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 94 ರನ್ ಗಳಿಸಿ ಗೆಲುವಿನ ಇನಿಂಗ್ಸ್ ಆಡಿದ್ದರು. ಆದರೆ, ಈ ಪಂದ್ಯದಲ್ಲಿ ಹೊರತುಪಡಿಸಿ ಬೇರೆ ಪಂದ್ಯಗಳಲ್ಲಿ ಅವರ ಪ್ರದರ್ಶನ ನೀರಸವಾಗಿದೆ. ಮಧ್ಯಮ ಸರದಿ ದಾಂಡಿಗರ ಅಸ್ಥಿರ ಪ್ರದರ್ಶನ ಮುಂಬೈಗೆ ತಲೆ ನೋವಾಗಿದೆ. ಕಳೆದ ಪಂದ್ಯದಲ್ಲಿ ವಿಕೆಟ್‌ಕೀಪರ್ ಇಶಾನ್ ಕಿಶನ್ ಅರ್ಧಶತಕ ಸಿಡಿಸಿ ಕೋಚ್ ಮಹೇಲ ಜಯವರ್ಧನೆ ನಿಟ್ಟುಸಿರುಬಿಡುವಂತೆ ಮಾಡಿದ್ದರು.
ಒಂದು ವೇಳೆ, ಯಾದವ್, ಲೂವಿಸ್, ಇಶಾನ್ ಹಾಗೂ ಜೆ.ಪಿ. ಡುಮಿನಿ ಒಗ್ಗಟ್ಟಿನಿಂದ ಆಡಿದರೆ ಅವರನ್ನು ಕಟ್ಟಿಹಾಕುವುದು ಕಷ್ಟಕರ. ಈ ನಾಲ್ವರಿಗೆ ಬೆನ್ ಕಟ್ಟಿಂಗ್, ಕೃನಾಲ್,ಹಾರ್ದಿಕ್ ಪಾಂಡ್ಯ ಸಾಥ್ ನೀಡುವ ಸಾಧ್ಯತೆಯಿದೆ.
ಬೌಲಿಂಗ್ ವಿಭಾಗದಲ್ಲಿ ಯುವ ಲೆಗ್ ಸ್ಪಿನ್ನರ್ ಮಯಾಂಕ್ ಮರ್ಕಂಡೆ ಈ ವರ್ಷ ಐಪಿಎಲ್‌ನಲ್ಲಿ ಮಿಂಚುತ್ತಿರುವ ಹೊಸಮುಖ. ರವಿವಾರದ ನಿರ್ಣಾಯಕ ಪಂದ್ಯದಲ್ಲಿ ಜೋಸ್ ಬಟ್ಲರ್‌ರಂತಹ ರಾಜಸ್ಥಾನದ ದಾಂಡಿಗರನ್ನು ಕಟ್ಟಿಹಾಕಲು ಮರ್ಕಂಡೆ ಪಾತ್ರ ಮಹತ್ವದ್ದಾಗಿದೆ. ಮುಂಬೈ ಬೌಲಿಂಗ್ ವಿಭಾಗದಲ್ಲಿ ಜಸ್‌ಪ್ರಿತ್ ಬುಮ್ರಾ, ಹಾರ್ದಿಕ್, ಮಿಚೆಲ್ ಮೆಕ್ಲಿನಘನ್, ಕಟ್ಟಿಂಗ್ ಹಾಗೂ ಕೃನಾಲ್ ಪಾಂಡ್ಯ ಅವರಿದ್ದಾರೆ. ಫಾರ್ಮ್‌ನಲ್ಲಿಲ್ಲದ ವೆಸ್ಟ್‌ಇಂಡೀಸ್ ಆಲ್‌ರೌಂಡರ್ ಕಿರೊನ್ ಪೊಲಾರ್ಡ್ ಮತ್ತೊಮ್ಮೆ ಆಡುವ 11ರ ಬಳಗದಿಂದ ಹೊರಗುಳಿಯುವ ಸಾಧ್ಯತೆಯಿದೆ.
ಮುಂಬೈ ತಂಡ 2015ರ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಆರು ಪಂದ್ಯಗಳ ಪೈಕಿ 5ರಲ್ಲಿ ಸೋತಿತ್ತು. ಆನಂತರ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಈ ವರ್ಷವೂ ಅದೇ ರೀತಿಯ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ರಾಜಸ್ಥಾನ ತಂಡದಲ್ಲಿ ಆರಂಭಿಕ ಆಟಗಾರ ಬಟ್ಲರ್ ಫಾರ್ಮ್ ಧನಾತ್ಮಕ ಅಂಶವಾಗಿದೆ. ಕಳಪೆ ಫಾರ್ಮ್‌ನಲ್ಲಿರುವ ನಾಯಕ ಅಜಿಂಕ್ಯ ರಹಾನೆ ಜವಾಬ್ದಾರಿಯಿಂದ ಆಡಬೇಕಾದ ಅಗತ್ಯವಿದೆ.
ಸಂಜು ಸ್ಯಾಮ್ಸನ್, ಸ್ಟುವರ್ಟ್ ಬಿನ್ನಿ ಹಾಗೂ ರಾಹುಲ್ ತ್ರಿಪಾಠಿ ಅವರು ಬಟ್ಲರ್‌ಗೆ ಸಾಥ್ ನೀಡಬೇಕಾದ ಅಗತ್ಯವಿದೆ. ಇಂಗ್ಲೆಂಡ್ ದಾಂಡಿಗ ಬೆನ್ ಸ್ಟೋಕ್ಸ್ ಈ ತನಕ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಅತ್ಯಂತ ದುಬಾರಿ ಬೌಲರ್ ಸೌರಾಷ್ಟ್ರದ ಜೈದೇವ್ ಉನದ್ಕಟ್ ಕೂಡ ಭಾರೀ ನಿರಾಸೆಗೊಳಿಸಿದ್ದಾರೆ.







