ಹೆಚ್ ಡಿ ಕುಮಾರಸ್ವಾಮಿ ಸಿಂಗಾಪುರಕ್ಕೆ

ಬೆಂಗಳೂರು, ಮೇ 13: ರಾಜ್ಯ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದ ಮರುದಿನವೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಿಂಗಾಪುರಕ್ಕೆ ಪ್ರಯಾಣಿಸಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಈಗಾಗಲೇ ಹೊರ ಬಿದ್ದಿರುವ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಜೆಡಿಎಸ್‌ಗೆ 26 ರಿಂದ 38 ಸ್ಥಾನಗಳು ಬರಲಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಗೆ ಸ್ಪಷ್ಟ ಬಹುಮತ ಬರುವುದಿಲ್ಲ ಎಂದು ಹೇಳಿವೆ. ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೆ, ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹೇಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷಗಳ ನಾಯಕರು ಕುಮಾರಸ್ವಾಮಿ ಮತ್ತು ದೇವೇಗೌಡರನ್ನು ಭೇಟಿಯಾಗಿದ್ದಾರೆ. ಹೀಗಾಗಿ, ಮುಂದಿನ ರಾಜಕೀಯ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಲು ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಿರುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.
ರಾಜ್ಯದಲ್ಲೇ ರಾಜಕೀಯ ಚರ್ಚೆಗಳು ನಡೆದರೆ ಅದು ಮಾಧ್ಯಮಗಳಿಗೆ ಸೋರಿಕೆಯಾಗುವ ಸಾಧ್ಯತೆ ಇರುವುದರಿಂದ ಕುಮಾರಸ್ವಾಮಿ ಸಿಂಗಾಪುರಕ್ಕೆ ತೆರಳಿದ್ದಾರೆ. ಮೇ 15 ಮತ ಏಣಿಕೆ ದಿನ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆಂದು ಮೂಲಗಳು ತಿಳಿಸಿವೆ.
ವಿಶ್ರಾಂತಿಗಾಗಿ ವಿದೇಶಕ್ಕೆ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಏಕಾಂಗಿಯಾಗಿ ಹಗಲಿರುಳೆನ್ನದೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರಿಂದ ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ, ಚಿಕಿತ್ಸೆ ಮತ್ತು ವಿಶ್ರಾಂತಿಗಾಗಿ ಪುತ್ರ ನಿಖಿಲ್ ಜೊತೆ ಸಿಂಗಾಪುರಕ್ಕೆ ಪ್ರಯಾಣಿಸಿದ್ದಾರೆ ಎಂದು ಜೆಡಿಎಸ್ ಮೂಲಗಳು ಖಚಿತಪಡಿಸಿವೆ.







