ಗುಂಡಿನ ದಾಳಿಗೆ ತುತ್ತಾಗಿದ್ದ ಪಿಡಬ್ಲ್ಯೂಡಿ ಮಹಿಳಾ ಉದ್ಯೋಗಿ ಸಾವು
ಹೊಸದಿಲ್ಲಿ, ಮೇ.13: ಎರಡು ವಾರಗಳ ಹಿಂದೆ ಹಿಮಾಚಲ ಪ್ರದೇಶದ ಕಸೌಲಿ ಜಿಲ್ಲೆಯಲ್ಲಿ ತೆರವು ಕಾರ್ಯಾಚರಣೆಗೆ ತೆರಳಿದ್ದ ಪಿಡಬ್ಲ್ಯೂಡಿಯ ಸಹಾಯಕ ನಗರ ಯೋಜನಾಧಿಕಾರಿ ಶೈಲ್ ಬಾಲಾ ಶರ್ಮಾರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಘಟನೆಯಲ್ಲಿ ಗಾಯಗೊಂಡಿದ್ದ ಪಿಡಬ್ಲ್ಯೂಡಿಯ ಇನ್ನೊರ್ವ ಸಿಬ್ಬಂದಿ ಶನಿವಾರದಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮೃತ ಅಧಿಕಾರಿಯನ್ನು ಸೋಲನ್ ಜಿಲ್ಲೆಯ ಧರ್ಮಪುರದ ಗುಲಾಬ್ ಸಿಂಗ್ ಎಂದು ಗುರುತಿಸಲಾಗಿದೆ. ಇವರು ಅಧಿಕಾರಿ ಬಾಲಾ ಶರ್ಮಾರ ಜೊತೆ ನಾರಾಯಣಿ ಅತಿಥಿಗೃಹಕ್ಕೆ ತೆರವು ಕಾರ್ಯಾಚರಣೆಗೆ ತೆರಳಿದ್ದರು. ಈ ವೇಳೆ ಅತಿಥಿಗೃಹದ ಮಾಲಕ ವಿಜಯ್ ಸಿಂಗ್ ಗುಂಡಿನ ದಾಳಿ ನಡೆಸಿದ ಪರಿಣಾಮ ಬಾಲಾ ಶರ್ಮಾ ಸ್ಥಳದಲ್ಲೇ ಅಸುನೀಗಿದ್ದರು. ಘಟನೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿ ನಂತರ ಪೊಲೀಸರಿಗೆ ಶರಣಾಗಿದ್ದ. ಘಟನೆಯ ಹಿನ್ನೆಲೆಯಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ಹೊಟೇಲ್ ಮಾಲಕರು ಮತ್ತು ಸಿಬ್ಬಂದಿ ತಮ್ಮ ಬಳಿಯಿರುವ ಶಸ್ತ್ರಗಳು, ಆಯುಧಗಳು ಮತ್ತು ಇತರೆ ಮಾರಕವಸ್ತುಗಳನ್ನು ಸಮೀಪದ ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಸೋಲನ್ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿನೋದ್ ಕುಮಾರ್ ಆದೇಶ ನೀಡಿದ್ದರು.
ಬಾಲಾ ಶರ್ಮಾ ಹತ್ಯೆಯ ವಿಚಾರಣೆಯನ್ನು ಸ್ವಪ್ರೇರಿತವಾಗಿ ಕೈಗೆತ್ತಿಕೊಂಡಿರುವ ಸರ್ವೋಚ್ಚ ನ್ಯಾಯಾಲಯ, ರಾಜ್ಯದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡಗಳ ತೆರವಿಗೆ ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ಹಿಮಾಚಲ ಪ್ರದೇಶ ಸರಕಾರದಿಂದ ವರದಿಯನ್ನು ಕೇಳಿದೆ.





