ವಿದ್ಯಾರ್ಥಿ ವೇತನ ಪಡೆಯುತ್ತಿರುವ ಶೇ.50ರಷ್ಟು ಎಸ್ಸಿ ವಿದ್ಯಾರ್ಥಿಗಳು ತೇರ್ಗಡೆಯಾಗಲೇಬೇಕು
ಇಲ್ಲದಿದ್ದಲ್ಲಿ ಶಾಲೆಗಳು ಕಪ್ಪುಪಟ್ಟಿಗೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಮೆ 13: ಕೇಂದ್ರ ಸರಕಾರಿ ಪ್ರಾಯೋಜಿತ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಯೋಜನೆಯ ವ್ಯಾಪ್ತಿಗೊಳಪಟ್ಟಿರುವ ಶಿಕ್ಷಣ ಸಂಸ್ಥೆಗಳು ಅಂತಹ ಕನಿಷ್ಠ ಶೇ.50ರಷ್ಟು ವಿದ್ಯಾರ್ಥಿಗಳು ಮುಂದಿನ ತರಗತಿಗೆ ತೇರ್ಗಡೆಗೊಳ್ಳುವಂತೆ ನೋಡಿಕೊಳ್ಳಬೇಕು,ಇಲ್ಲದಿದ್ದರೆ ಅಂತಹ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಶನಿವಾರ ಅಧಿಸೂಚಿಸಿರುವ ಪರಿಷ್ಕೃತ ನಿಯಮಾವಳಿಗಳಲ್ಲಿ ಇದನ್ನು ಸ್ಪಷ್ಟಪಡಿಸಲಾಗಿದೆ.
ಶಿಕ್ಷಣ ಸಂಸ್ಥೆಗಳಲ್ಲಿ ಅವ್ಯವಹಾರಗಳಿಗೆ ಕಡಿವಾಣ ಹಾಕುವುದು ನಿಯಮಾವಳಿಗಳ ಪರಿಷ್ಕರಣೆಯ ಉದ್ದೇಶವಾಗಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಶಿಕ್ಷಣ ಸಂಸ್ಥೆಗಳು ನಕಲಿ ಪ್ರವೇಶಗಳನ್ನು ತೋರಿಸಿ ಎಸ್ಸಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಯೋಜನೆಯಡಿ ಬೃಹತ್ ಮೊತ್ತದ ವಿದ್ಯಾರ್ಥಿ ವೇತನ ಹಣವನ್ನು ಕಬಳಿಸಿರುವ ಪ್ರಕರಣಗಳಿವೆ. ಅಥವಾ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ ವಿದ್ಯಾರ್ಥಿ ವೇತನದ ಹಣವನ್ನು ಪಡೆದುಕೊಂಡು ಅವರಿಗೆ ಸರಿಯಾಗಿ ಕಲಿಸದ ಪರಿಣಾಮ ಅನುತ್ತೀರ್ಣಗೊಳ್ಳುವುದೂ ನಡೆಯುತ್ತಿದೆ. ಪರಿಷ್ಕೃತ ನಿಯಮಗಳು ಇಂತಹ ಅವ್ಯವಹಾರಗಳನ್ನು ತಡೆಯಲಿವೆ ಎಂದರು.
ಪರಿಷ್ಕೃತ ನಿಯಮಗಳಂತೆ ಇನ್ನು ಮುಂದೆ ನಿರ್ವಹಣೆ ಭತ್ಯೆಗಳು ಮತ್ತು ಮರುಪಾವತಿಸಲಾಗದ ಶುಲ್ಕಗಳು ನೇರವಾಗಿ ಫಲಾನುಭವಿ ವಿದ್ಯಾರ್ಥಿಗಳ ಖಾತೆಗಳಿಗೆ ಜಮೆಯಾಗಲಿವೆ.
ರಾಜ್ಯಗಳು ವಿದ್ಯಾರ್ಥಿ ವೇತನದ ಹಣವನ್ನು ಬಿಡುಗಡೆ ಮಾಡುತ್ತಿದ್ದು,ಈವರೆಗಿನ ಪದ್ಧತಿಯಂತೆ ಶುಲ್ಕಗಳನ್ನು ಶಿಕ್ಷಣ ಸಂಸ್ಥೆಗಳಿಗೆ ಮತ್ತು ನಿರ್ವಹಣೆ ಭತ್ಯೆಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು. ಆದರೆ ಹಲವಾರು ಖಾಸಗಿ ಮತ್ತು ಸರಕಾರಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಶುಲ್ಕಗಳನ್ನು ವಸೂಲು ಮಾಡಿ ಹಣವನ್ನು ಕಬಳಿಸುತ್ತಿದ್ದುದು ಸಚಿವಾಲಯದ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದರು.







