ಪುತ್ತೂರು: ಕೆಸ್ಸಾರ್ಟಿಸಿ ಬಸ್ಸು ನಿಲ್ದಾಣದಲ್ಲಿ ಸ್ವಚ್ಚತಾ ಅಭಿಯಾನ
ಸ್ವಚ್ಚತಾ ಜಾಗೃತಿ ಅಭಿಯಾನ

ಪುತ್ತೂರು, ಮೇ 13: ಟೀಮ್ ಸ್ವಚ್ಛ ಪುತ್ತೂರು ತಂಡವು ರವಿವಾರ ಪುತ್ತೂರು ನಗರದ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣದ ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಪರಿಸರದ ಸಾರ್ವಜನಿಕರಲ್ಲಿ ಸ್ವಚ್ಛತಾ ಜಾಗೃತಿ ಮೂಡಿಸಿತು.
ಸ್ವಚ್ಛತಾ ಅಭಿಯಾನವನ್ನು ನಾಗರಿಕರಾದ ಉದಯ ಕುಮಾರ್ ಮತ್ತು ರಾಧಾಕೃಷ್ಣ ಭಟ್ ಅವರು ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು. ಸಾರ್ವಜನಿಕರು ಕೇವಲ ಸ್ವಚ್ಛತೆ ಮಾಡುವುದನ್ನು ನಿಂತು ನೋಡಿದರೆ ಸಾಲದು. ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಂಡು ಸ್ವಚ್ಛ ಪುತ್ತೂರಿನ ಕಲ್ಪನೆಯನ್ನು ಸಾಕಾರಗೊಳಿಸಬೇಕು. ಹೀಗೆ ಮಾಡಿದಲ್ಲಿ ಮಾತ್ರ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ್ ಪರಿಕಲ್ಪನೆಗೆ ನಾವು ಕೈಜೋಡಿಸಲು ಸಾಧ್ಯವಾಗುತ್ತದೆ ಅವರು ಹೇಳಿದರು.
ಬಸ್ಸು ನಿಲ್ದಾಣ ಪರಿಸರದ ಹೊಟೇಲ್, ಅಂಗಡಿ, ತಂಪು ಪಾನೀಯ ಮಾರಾಟ ಕೇಂದ್ರಗಳಿಗೆ ಭೇಟಿ ನೀಡಿದ ಅಭಿಯಾನ ತಂಡವು ತಮ್ಮ ತಮ್ಮ ಉಧ್ಯಮ ಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಕಸವನ್ನು ಪರಿಸರದಲ್ಲಿ ಎಸೆಯದಂತೆ ಜಾಗೃತಿ ಮೂಡಿಸಬೇಕು ಎಂಬ ಉಲ್ಲೇಖವಿರುವ ಕರಪತ್ರಗಳನ್ನು ವಿತರಿಸಿ ಸ್ವಚ್ಛತಾ ಜಾಗೃತಿ ಮೂಡಿಸಿತು.
ಅಭಿಯಾನದಲ್ಲಿ ಟೀಮ್ ಸ್ವಚ್ಛ ಪುತ್ತೂರು ಸಂಚಾಲಕ ಶ್ರೀಕೃಷ್ಣ ಉಪಾಧ್ಯಾಯ, ಜಿ. ಕೃಷ್ಣ, ಸಂದೀಪ್ ಲೋಬೋ, ಕೃಷ್ಣ ಮೋಹನ್, ಡಾ. ಸದಾಶಿವ ಭಟ್, ಯುವ ಕಾರ್ಯಕರ್ತೆ ವಿಜೇತಾ ಬಲ್ಲಾಳ್, ಸುರೇಶ್ ಕಲ್ಲಾರೆ, ಜಯಪ್ರಕಾಶ್ ಆಚಾರ್ಯ, ಶಂಕರ್ ಮಲ್ಯ ಮತ್ತಿತರರು ಉಪಸ್ಥಿತರಿದ್ದರು.







