ಮ್ಯಾಡ್ರಿಡ್ ಓಪನ್: ಪೆಟ್ರಾ ಕ್ವಿಟೋವಾ ಮೂರನೇ ಬಾರಿ ಚಾಂಪಿಯನ್
ಮ್ಯಾಡ್ರಿಡ್, ಮೇ.13: ಹತ್ತನೇ ಶ್ರೇಯಾಂಕದ ಝೆಕ್ ಗಣರಾಜ್ಯದ ಟೆನಿಸ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ನೆದರ್‌ಲ್ಯಾಂಡ್ಸ್‌ನ ಕಿಕಿ ಬರ್ಟನ್ಸ್ ವಿರುದ್ಧ ಜಯ ಸಾಧಿಸುವ ಮೂಲಕ ಮೂರನೇ ಬಾರಿ ಮ್ಯಾಡ್ರಿಡ್ ಓಪನ್ ಟೆನಿಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಶನಿವಾರ ಕಿಕಿ ವಿರುದ್ಧ ನಡೆದ ಸುದೀರ್ಘ ಹೋರಾಟದಲ್ಲಿ ಕ್ವಿಟೋವಾ 7-6(8/6), 4-6, 6-3 ಸೆಟ್‌ಗಳ ಅಂತರದಿಂದ ವಿಜಯವನ್ನು ತನ್ನದಾಗಿಸಿಕೊಂಡಿದ್ದಾರೆ. 2011 ಮತ್ತು 2015ರಲ್ಲಿ ಮ್ಯಾಡ್ರಿಡ್ ಓಪನ್ ಚಾಂಪಿಯನ್‌ಶಿಪ್ ಜಯಿಸಿದ್ದ ಕ್ವಿಟೋವಾ ಪ್ರಸಕ್ತ ವರ್ಷವೂ ಟೈಟಲ್ ತನ್ನದಾಗಿಸುವ ಮೂಲಕ 2018ರಲ್ಲಿ ಈವರೆಗೆ ಸೇಂಟ್ ಪೀಟರ್ಸ್, ದೋಹಾ ಮತ್ತು ಪ್ರೇಗ್ ಸೇರಿ ಒಟ್ಟು ನಾಲ್ಕು ಟೈಟಲ್‌ಗಳನ್ನು ಜಯಿಸಿದ್ದಾರೆ. ಇದು ಕ್ವಿಟೋವಾ ಜೀವನದ 24ನೇ ಚಾಂಪಿಯನ್ಸ್ ಟೈಟಲ್ ಆಗಿದೆ. ಚಾಂಪಿಯನ್‌ಶಿಪ್‌ನಲ್ಲಿ ವಿಶ್ವದ ನಂ.1 ಟೆನಿಸ್ ತಾರೆ ಮರಿಯಾ ಶರಪೋವಾ ಮತ್ತು ಕ್ಯಾರೊಲಿನಾ ವೊಝ್ನಿಯಾಕಿಯನ್ನು ಪರಾಭವಗೊಳಿಸಿದ್ದ ಶ್ರೇಯಾಂಕ ರಹಿತ ಕಿಕಿ ಬರ್ಟನ್ಸ್ ಅಂತಿಮ ಹಣಾಹಣಿಯಲ್ಲಿ ಕ್ವಿಟೋವಾ ಮುಂದೆ ಸೋಲೊಪ್ಪಿಕೊಂಡರು.





