ಉಡುಪಿ: ಧಾರ್ಮಿಕ ಆಚರಣೆಗಳ ಚಿಂತನ ಮಂಥನ ಕಾರ್ಯಕ್ರಮ

ಉಡುಪಿ, ಮೇ 13: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಧಾರ್ಮಿಕ ಆಚರಣೆ ಗಳ ಚಿಂತನ ಮಂಥನ ಕಾರ್ಯಕ್ರಮವನ್ನು ಉಡುಪಿ ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಆಯೋಜಿಸಲಾಗಿತ್ತು.
ಪರ್ಯಾಯ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ, ನಾವು ಮಾಡುವ ಯಾವುದೇ ಧಾರ್ಮಿಕ ಕೆಲಸಗಳು ಜ್ಞಾನ ಪೂರ್ವಕ ಮಾಡಿದರೆ ಆ ಕರ್ಮಕ್ಕೆ ಹೆಚ್ಚು ಫಲ ಸಿಗುತ್ತದೆ. ಯಾವುದೇ ಸಂಶಯವಿಲ್ಲದೆ ನಿಷ್ಕಲ್ಮಶ ಮನಸ್ಸಿನಿಂದ ದೇವತಾರಾಧನೆಯನ್ನು ಮಾಡಬೇಕು ಎಂದರು.
ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮಾತ ನಾಡಿ, ಹಿರಿಯರೊಂದಿಗೆ ಕಿರಿಯರೂ ಕೈಜೋಡಿಸಿದಾಗ ಭವಿಷ್ಯತ್ತಿನಲ್ಲಿ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಚಿಂತನ ಮಂಥನದಲ್ಲಿ ವಿದ್ವಾನ್ ಹೆರ್ಗ ರವೀಂದ್ರ ಭಟ್, ಡಾ.ವಂಶಿಕೃಷ್ಣ ಆಚಾರ್ಯ, ವಿದ್ವಾನ್ ಗೋಪಾಲಾಚಾರ್ಯ, ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಭಾಗವಹಿಸಿ ಪ್ರಶ್ನೆಗಳಿಗೆ ಶಾಸ್ತ್ರಿಯ ಉತ್ತರ ನೀಡಿದರು. ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ವಿಷ್ಣು ಪಾಡಿಗಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಪ್ರವೀಣ ಉಪಾದ್ಯಾಯ ವಂದಿಸಿದರು.





