ಕಥುವಾ ಬಾಲಕಿಯ ಶವ ದಫನಕ್ಕೆ ಜಾಗ ನೀಡಿದ್ದ ವ್ಯಕ್ತಿಗೆ ಬೆದರಿಕೆ

ಜಮ್ಮು, ಮೇ 13: ಸಂಘಪರಿವಾರ ಸಂಘಟನೆಯ ಸಂಘಟನೆಯ ನಾಯಕರೊಬ್ಬರು ತನಗೆ ಬೆದರಿಕೆ ಒಡ್ಡಿದ್ದಾರೆ ಎಂದು ಜಮ್ಮು ಹಾಗೂ ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಈ ವರ್ಷಾರಂಭದಲ್ಲಿ ಅತ್ಯಾಚಾರ ಹಾಗೂ ಹತ್ಯೆಗೀಡಾದ ಅಪ್ರಾಪ್ತ ಬಾಲಕಿಯ ದಫನಕ್ಕೆ ಜಾಗ ನೀಡಿದ್ದ ವ್ಯಕ್ತಿಯೋರ್ವರು ಆರೋಪಿಸಿದ್ದಾರೆ.
ಈ ಪ್ರದೇಶ ಬಿಟ್ಟು ತೆರಳುವಂತೆ ತನಗೆ ಹಿಂದೂ ಏಕ್ತಾ ಮಂಚ್‌ನ ನಾಯಕರು ಬೆದರಿಕೆ ಒಡ್ಡಿದ್ದಾರೆ ಹಾಗೂ ನಿಂದಿಸಿದ್ದಾರೆ ಎಂದು ದೂರಿ ಅಲೆಮಾರಿ ಗುಜ್ಜರ್ ಸಮುದಾಯದ ಮುಹಮ್ಮದ್ ರಫೀಕ್ ಪೊಲೀಸ್ ದೂರು ದಾಖಲಿಸಿದ್ದಾರೆ.
‘‘ಸರಪಂಚ್ ಕಾಂತ ಕುಮಾರ್ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಮುಹಮ್ಮದ್ ರಫೀಕ್ ನೀಡಿದ ದೂರನ್ನು ನಾವು ಸ್ವೀಕರಿಸಿದ್ದೇವೆ.’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರದೇಶದಿಂದ ಬಿಟ್ಟು ತೆರಳುವಂತೆ ಹಿಂದೂ ಏಕ್ತಾ ಮಂಚ್‌ನ ನಾಯಕ ಕಾಂತ್ ಕುಮಾರ್ ಬೆದರಿಕೆ ಒಡ್ಡಿದ್ದಾರೆ ಎಂದು ರಫೀಕ್ ದೂರಿದ್ದಾರೆ.
ರಫೀಕ್ ದೂರಿನಲ್ಲಿ ಅಸಾಂಗತ್ಯ ಕಾಣುತ್ತಿದೆ ಹಾಗೂ ಯಾವುದೇ ತೀರ್ಮಾನಕ್ಕೆ ಬರುವ ಮುನ್ನ ನಾವು ಈ ವಿಷಯದ ಕುರಿತು ಪ್ರಾಥಮಿಕ ತನಿಖೆ ನಡೆಸಲಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಾಪತ್ತೆಯಾಗಿ ಒಂದು ವಾರಗಳ ಬಳಿಕ ಜನವರಿ 17ರಂದು 8 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ದಫನ ಮಾಡಲು ಗುಜ್ಜರ್ ಬಸ್ತಿ ಬಂಡಿ ನಿವಾಸಿಯಾಗಿರುವ ರಫೀಕ್ ಜಾಗ ನೀಡಿದ್ದರು.







