ಮಂಡ್ಯ: ರೈತಸಂಘದ ಕಾರ್ಯಕರ್ತರಿಗೆ ಹಲ್ಲೆ ಆರೋಪ; ಸಂಸದ ಸಿ.ಎಸ್.ಪುಟ್ಟರಾಜು ವಿರುದ್ಧ ದೂರು

ಮಂಡ್ಯ, ಮೇ 13: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಸಂಸದ ಸಿ.ಎಸ್.ಪುಟ್ಟರಾಜು ಬೆದರಿಕೆ ಹಾಕಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ರೈತಸಂಘದ ಕಾರ್ಯಕರ್ತ ದೀಕ್ಷಿತ್ ಅವರು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚುನಾವಣಾ ದಿನವಾದ ಮೇ 12 ರಂದು ಕ್ಯಾತನಹಳ್ಳಿಯಿಂದ ನಾನು, ಸಂಜು, ರಾಕೇಶ್, ನಾಗೇಂದ್ರ, ಮುರಳಿರಾವ್, ಬಸವನಾಯಕ, ಅರ್ಜುನ, ಮಂಜು ಮತ್ತು ಗಣೇಶ್ ಎಂಬುವವರು ಚುನಾವಣೆ ಪ್ರಕ್ರಿಯೆ ವೀಕ್ಷಣೆಗೆಂದು ಓಮ್ನಿ ಕಾರಿನಲ್ಲಿ ರಾಗಿಮುದ್ದನಹಳ್ಳಿಗೆ ತೆರಳುವ ಮಾರ್ಗಮಧ್ಯೆ ಚಿನಕುರಳಿಯಲ್ಲಿ ನಮ್ಮ ಕಾರು ಕೆಟ್ಟು ನಿಂತಿತು. ಸ್ನೇಹಿತರು ಕಾರು ತಳ್ಳುವ ಧಾವಂತಲ್ಲಿರುವಾಗ ಇನ್ನೋವಾ ಕಾರಿನಲ್ಲಿ ಬಂದ ಸಂಸದ ಸಿ.ಎಸ್.ಪುಟ್ಟರಾಜು ನಮಗೆ ಬೈದು, ಏಕಾಏಕಿ ನನ್ನ ಮೇಲೆ ದಾಳಿ ಮಾಡಿ ನನ್ನ ಕೊರಳಿನ ಪಟ್ಟಿ ಹಿಡಿದೆಳೆದು ಕಪಾಳಕ್ಕೆ ಎರಡು ಮೂರು ಬಾರಿ ಹೊಡೆದರು ಎಂದು ದೀಕ್ಷಿತ್ ದೂರಿನಲ್ಲಿ ಆರೋಪಿಸಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಶಾಂತಿ ಕಾಪಾಡುವ ದೃಷ್ಠಿಯಿಂದ ಘಟನೆ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿರಲಿಲ್ಲ. ಚುನಾವಣೆ ಬಳಿಕ ತಿಳಿಸಿದಾಗ ಚಿನಕುರಳಿ ಪಂಚಾಯಿತಿದಾರರ ಗಮನಕ್ಕೆ ತಂದು ನ್ಯಾಯ ಪಂಚಾಯಿತಿ ಮಾಡುವ ಎಂದರು. ಆದರೆ, ಯಾರೊಬ್ಬರು ಮುಂದೆ ಬಾರದ ಕಾರಣ ತಡವಾಗಿ ದೂರು ದಾಖಲಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
ದೂರಿನ ಮೇರೆಗೆ ಸಂಸದ ಸಿ.ಎಸ್.ಪುಟ್ಟರಾಜು ವಿರುದ್ಧ ಸೆಕ್ಷನ್ 341, 323, 504 ರೀತ್ಯಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.







