ಇಬ್ಬರು ವಿದ್ಯಾರ್ಥಿಗಳನ್ನು ಬೆದರಿಸಿ ಚಿನ್ನಾಭರಣ ದೋಚಿದ ದುಷ್ಕರ್ಮಿಗಳು
ಮಂಗಳೂರು, ಮೇ 13: ನಗರದ ಕೆ.ಎಸ್.ರಾವ್ ರಸ್ತೆಯಲ್ಲಿರುವ ಮಾಲ್‌ವೊಂದಕ್ಕೆ ಆಗಮಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಬೆದರಿಸಿ ಚಿನ್ನಾಭರಣ ಎಗರಿಸಿದ ಬಗ್ಗೆ ವಿದ್ಯಾರ್ಥಿಗಳು ಬಂದರು ಠಾಣೆಗೆ ದೂರು ನೀಡಿದ್ದಾರೆ.
ಮೇ 8ರಂದು ಈ ಘಟನೆ ನಡೆದಿದೆ. ಉಳ್ಳಾಲ ನಿವಾಸಿ ಕೀರ್ತನ್ (19) ಮತ್ತು ಆತನ ಗೆಳೆಯ ಸಂದೀಪ್ ಜೈನ್ (19) ಮಾಲ್‌ಗೆ ಬಂದಿದ್ದರು. ಇವರಿಬ್ಬರು ನಗರದ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಓದುತ್ತಿದ್ದು, ಮಾಲ್‌ಗೆ ಸುತ್ತಿ ಸಿನಿಮಾ ನೋಡಿದ ಬಳಿಕ ಮನೆಯತ್ತ ಹೊರಡಲು ಸಿದ್ಧರಾಗಿದ್ದರು. ಈ ಸಂದರ್ಭ ಮಾಲ್‌ನ ಪ್ರವೇಶ ದ್ವಾರದ ಸಮೀಪ ವ್ಯಕ್ತಿಯೊಬ್ಬ ತಡೆದು ನಿಲ್ಲಿಸಿ ‘ನೀವು ಕಾಲೇಜಿನಲ್ಲಿ ನಮ್ಮ ಹುಡುಗರಿಗೆ ಹೊಡೆದಿದ್ದೀರಿ. ಈ ಬಗ್ಗೆ ನಮಗೆ ದೂರುಗಳು ಬಂದಿವೆ. ನಿಮ್ಮ ಕುತ್ತಿಗೆಯಲ್ಲಿರುವ ಚಿನ್ನಾಭರಣ ನೀಡಿದರೆ ನಮ್ಮ ಬಾಸ್‌ಗೆ ನೀಡಿ ಸಮಾಧಾನ ಮಾಡುತ್ತೇನೆ. ಇಲ್ಲದಿದ್ದರೆ ನಿಮ್ಮ ಮೇಲೆ ದಾಳಿ ಮಾಡುತ್ತಾರೆ’ ಎಂದು ಹೇಳಿ ಬೇದರಿಸಿದ್ದಾರೆಂದು ಆರೋಪಿಸಲಾಗಿದೆ. ಇದರಿಂದ ಆತಂಕಿತರಾದ ಇಬ್ಬರು ವಿದ್ಯಾರ್ಥಿಗಳು ಏನು ಮಾಡಬೇಕೆಂದು ತೋಚದೆ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ನೀಡಿದ್ದಾರೆ. ಕೀರ್ತನ್ ಧರಿಸಿದ ಚಿನ್ನದ ಮೌಲ್ಯ 45ಸಾವಿರ ರೂ. ಮತ್ತು ಸಂದೀಪ್ ಜೈನ್ ಧರಿಸಿದ್ದ ಸರ ಮೌಲ್ಯ 65 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ವಂಚನೆಯ ಬಗ್ಗೆ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ.





