ದಾವಣಗೆರೆ: ಮತ ಚೀಟಿಗಳ ಪ್ರಿಂಟ್ ತೆಗೆದುಕೊಡುತ್ತಿದ್ದವನ ಮೇಲೆ ಹಲ್ಲೆ; ಪಾಲಿಕೆ ಸದಸ್ಯನ ಬಂಧನ

ದಾವಣಗೆರೆ,ಮೇ.13: ಮತ ಚೀಟಿಗಳ ಪ್ರಿಂಟ್ ತೆಗೆದುಕೊಡುತ್ತಿದ್ದ ಅಂಗಡಿ ಮಾಲಿಕ ಹಾಗೂ ಬಿಜೆಪಿ ಮುಖಂಡನೊಬ್ಬನ ಮೇಲೆ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ ಹಲ್ಲೆ ಮಾಡಿದ ಘಟನೆ ಇಲ್ಲಿನ ಭಗತ್ ಸಿಂಗ್ ನಗರದ ಆಟೋ ನಿಲ್ದಾಣದ ಬಳಿ ಶನಿವಾರ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ ಶ್ರೀನಿವಾಸ್ ಬಂಧಿತ ಆರೋಪಿ. ಭಗತ್ ಸಿಂಗ್ ನಗರದ ಆಟೋ ನಿಲ್ದಾಣದ ಬಳಿ ಕಂಪ್ಯೂಟರ್ ಸೆಂಟರ್ ನಲ್ಲಿ ಬಿಜೆಪಿ ಮುಖಂಡ ಆರ್.ಲಕ್ಷ್ಮಣ ಮತದಾರರ ಪಟ್ಟಿಯ ಪ್ರಿಂಟ್‍ಔಟ್ ತೆಗೆಸಿಕೊಡುತ್ತಿದ್ದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಶ್ರೀನಿವಾಸ ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಪ್ರವೀಣ ಕೆಟಿಜೆ ನಗರ ಪೊಲೀಸರಿಗೆ ದೂರು ನೀಡಿದ್ದರು.
ಮತದಾರರಿಗೆ ಗುರುತಿನ ಚೀಟಿ ನೀಡುವುದು ತನ್ನ ಸೇವಾ ಕೆಲಸ. ಅದಕ್ಕೆ ಅಡ್ಡಿಪಡಿಸದಂತೆ ಪ್ರವೀಣ ಮನವಿ ಮಾಡಿದರೂ ಸ್ಪಂದಿಸದೆ ತನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಪ್ರವೀಣ ದೂರಿದ್ದಾನೆ. ಹಲ್ಲೆ ಮಾಡಿದ ಶ್ರೀನಿವಾಸನನ್ನು ಪೊಲೀಸರು ಬಂಧಿಸಿ, ಠಾಣೆಗೆ ಕರೆದೊಯ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾಲರ್ ಹಿಡಿದು ಎಳೆದೋಯ್ದ ಪೊಲೀಸರು!
ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ ಶ್ರೀನಿವಾಸ್ ಅವರನ್ನು ಪೊಲೀಸರು ಕಾಲರ್ ಹಿಡಿದು, ಕೈಕಟ್ಟಿ ಕರೆದುಕೊಂಡಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು ಎಲ್ಲೆಡೆ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಪೊಲೀಸರು ಶ್ರೀನಿವಾಸ್‍ರನ್ನು ಕಾಲರ್ ಹಿಡಿದು ಎಳೆದುಕೊಂಡು ಹೋಗುತ್ತಿದ್ದಾರೆ.







