ಬೇರನ್ನು ಮರೆತರೆ ಮರಕ್ಕೆಲ್ಲಿದೆ ಬದುಕು?

ಹೆತ್ತವರು ಮತ್ತು ಹಿರಿಯ ನಾಗರಿಕರ ಕ್ಷೇಮಪಾಲನೆ ಹಾಗೂ ಕಲ್ಯಾಣ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ವಯಸ್ಸಾಗಿರುವ ಹೆತ್ತವರನ್ನು ಸರಿಯಾಗಿ ನೋಡಿಕೊಳ್ಳದೇ ಇರುವ ಹಾಗೂ ಅವರನ್ನು ಅವಹೇಳನ ಮಾಡುವ ಮಕ್ಕಳು ಇನ್ನು ಮೂರು ತಿಂಗಳು ಅಲ್ಲ, ಆರು ತಿಂಗಳ ಕಾಲ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಹಾಗೆಯೇ ಹೆತ್ತವರಿಗಾಗಿ ಮಕ್ಕಳು ನೀಡುವ 10 ಸಾವಿರ ರೂ.ಗಳನ್ನು ಅವರವರ ಆದಾಯಕ್ಕನುಸಾರವಾಗಿ ಪರಿಷ್ಕರಿಸಲೂ ನಿರ್ಧರಿಸಲಾಗಿದೆ. ಕೇಂದ್ರ ಸಂಪುಟದಲ್ಲಿ ಅದಕ್ಕೆ ಒಪ್ಪಿಗೆ ಸಿಕ್ಕಿದ ಕೂಡಲೇ 2007ರ ಕಾಯ್ದೆ ಸ್ಥಾನದಲ್ಲಿ ಹೊಸ ಕಾಯ್ದೆ ಜಾರಿಯಾಗಲಿದೆ. ಭಾರತದಲ್ಲಿ ದಿನದಿಂದ ದಿನಕ್ಕೆ ಕುಟುಂಬ ವ್ಯವಸ್ಥೆ ದುರ್ಬಲವಾಗುತ್ತಿದೆ ಎನ್ನುವುದಕ್ಕೆ ಹಿಡಿದ ಕನ್ನಡಿಯಾಗಿದೆ ಸರಕಾರ ಜಾರಿಗೊಳಿಸುತ್ತಿರುವ ಈ ಕಾನೂನು. ಪೋಷಕರು-ಮಕ್ಕಳ ಸಂಬಂಧ ಕರುಳಿನಿಂದ ಹೆಣೆಯಲ್ಪಟ್ಟದ್ದು. ಹುಟ್ಟಿದ ಮಗುವಿಗೆ ಹಾಲುಣಿಸಬೇಕು ಎಂದು ತಾಯಿಗೆ ಯಾವ ಕಾನೂನೂ ಆದೇಶಿಸಿರುವುದಿಲ್ಲ. ಯಾವುದೋ ಕಾನೂನಿಗೆ ಹೆದರಿ ಅವರು ಮಕ್ಕಳನ್ನು ಸಾಕಿ ಪೋಷಿಸುವುದಿಲ್ಲ. ಭವಿಷ್ಯದಲ್ಲಿ ತನ್ನನ್ನು ಜೋಪಾನ ಮಾಡಿಯಾರು ಎಂಬ ಸ್ವಾರ್ಥದಿಂದಲೂ ಮಕ್ಕಳನ್ನು ಪ್ರೀತಿಸುವುದಿಲ್ಲ. ಹೃದಯದ ಕರೆಗೆ ಓಗೊಟ್ಟು ಅವರು ಮಕ್ಕಳಿಗೆ ವಾತ್ಸಲ್ಯವನ್ನು ಸುರಿಸುತ್ತಾರೆ. ಪ್ರಕೃತಿಯೇ ರೂಪಿಸಿದ ಕಾನೂನಿಗೆ ತಲೆಬಾಗಿ ಮನುಷ್ಯರು ಮಾತ್ರವಲ್ಲ, ಪ್ರಾಣಿ, ಪಕ್ಷಿಗಳೂ ತಮ್ಮ ತಮ್ಮ ಕರ್ತವ್ಯಗಳನ್ನು ನೆರವೇರಿಸುತ್ತವೆ. ಈ ನಿಟ್ಟಿನಲ್ಲಿ ಮನುಷ್ಯನಾದವನ ಹೊಣೆಗಾರಿಕೆ ಬಹುದೊಡ್ಡದು.
ಭಾರತೀಯ ಸಮಾಜ ಕುಟುಂಬ ತಳಹದಿಯ ಮೇಲೆ ನಿಂತಿದೆ. ಕೌಟುಂಬಿಕ ವೌಲ್ಯಗಳೇ ಈ ಸಮಾಜವನ್ನು ಪೊರೆಯುತ್ತಿರುವುದು. ಒಂದು ಕಾಲದಲ್ಲಿ ಭಾರತ ಅವಿಭಕ್ತ ಕುಟುಂಬಕ್ಕೆ ಹೆಸರಾಗಿತ್ತು. ಹಳೆ ಬೇರು-ಹೊಸ ಚಿಗುರು ಅವಿನಾಭಾವವಾಗಿ ಬದುಕುತ್ತಿತ್ತು. ಹಾಗೆಂದು ಅವಿಭಕ್ತ ಕುಟುಂಬದಲ್ಲಿ ಎಲ್ಲವೂ ಸರಿ ಇತ್ತು ಎಂದು ಹೇಳುವುದಕ್ಕಾಗುವುದಿಲ್ಲ. ಹಲವು ದೋಷಗಳ ನಡುವೆಯೂ ಕುಟುಂಬದ ಹಿರಿಯ ಸದಸ್ಯರು ಬೀದಿ ಪಾಲಾಗುವ ಸನ್ನಿವೇಶ ಅವಿಭಕ್ತ ಕುಟುಂಬದಲ್ಲಿ ಇರಲಿಲ್ಲ. ಈಗ ಕುಟುಂಬಗಳು ಇನ್ನಷ್ಟು ಸಣ್ಣ ಸಣ್ಣ ಘಟಕಗಳಾಗಿ ಒಡೆದಿವೆಯಾದರೂ, ತಂದೆ, ಮಗ, ಸೊಸೆ ಅಥವಾ ತಾಯಿ ಮಗ ಸೊಸೆ ಅಥವಾ ತಂದೆ ಮಗಳು ಅಳಿಯ ಹೀಗೆ ಎರಡು ತಲೆಮಾರಾದರೂ ಒಂದು ಪುಟ್ಟ ಮನೆಯಲ್ಲಿ ಜೊತೆಯಾಗಿ ಇರುವಂತಹ ವಾತಾವರಣ ಇದೆ. ಹೇಗೆ ಯಾವ ಸ್ವಾರ್ಥವೂ ಇಲ್ಲದೆ ತಂದೆತಾಯಿಯರು ತಮ್ಮನ್ನು ಪೋಷಿಸಿದರೋ, ಹಾಗೆಯೇ ಅವರ ವೃದ್ಧಾಪ್ಯದಲ್ಲಿ ಅವರಿಗೆ ಹೆಗಲಾಗುವುದು ಮಕ್ಕಳ ಕರ್ತವ್ಯ. ಇದು ಪಾಲಕರಿಗೆ ಮಾಡುವ ಉಪಕಾರವಲ್ಲ. ಕುಟುಂಬ ವೌಲ್ಯದ ಒಂದು ಪ್ರಮುಖ ಭಾಗವಾಗಿದೆ. ಅದೊಂದು ಚಕ್ರ. ನಾಳೆ ನಾವು ವೃದ್ಧರಾದಾಗ ನಮ್ಮ ಮಕ್ಕಳು ನಮ್ಮ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಅವರಿಗೆ ತಿಳಿಸಿಕೊಡುವ ಭಾಗವೂ ಹೌದು. ಒಂದು ವೇಳೆ, ನಮ್ಮ ಪಾಲಕರನ್ನು ನಾವು ತಿರಸ್ಕರಿಸಿದರೆ, ಅವರನ್ನು ಕೀಳಾಗಿ ನಡೆಸಿಕೊಂಡರೆ, ನಮ್ಮ ಮಕ್ಕಳಿಂದ ನಾವು ಕೂಡ ಅದನ್ನೇ ಎದುರಿಸಬೇಕಾಗುತ್ತದೆ. ಯಾಕೆಂದರೆ ಬೇವನ್ನು ಬಿತ್ತಿ, ಮಾವಿನ ಕೊಯ್ಲನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಇಷ್ಟಕ್ಕೂ ಮನೆಯಲ್ಲಿರುವ ಹಿರಿಯರು ಅನುಪಯುಕ್ತರು ಎಂಬ ಮನಸ್ಥಿತಿಯನ್ನೇ ಈ ತಲೆಮಾರು ಬದಲಿಸಿಕೊಳ್ಳಬೇಕಾಗಿದೆ. ಬೇರಿನಂತೆಯೇ ಮರವಿರುತ್ತದೆ. ಬೇರನ್ನು ನಿರ್ಲಕ್ಷಿಸಿದರೆ ಮರದ ಬೆಳವಣಿಗೆಯನ್ನು ನಿರೀಕ್ಷಿಸುವಂತಿಲ್ಲ. ನಮ್ಮ ಮಕ್ಕಳು ಅಜ್ಜಂದಿರ ಮಡಿಲಲ್ಲಿ ಬೆಳೆಯಬೇಕು. ಅವರು ಕಂಡುಂಡ ಜೀವನಾನುಭವಕ್ಕೆ ಹೊಸ ಅನುಭವಗಳು ಬೆರೆತಾಗ ಮಾತ್ರ ಅದು ಬದುಕು ಸಮೃದ್ಧವಾಗುತ್ತದೆ.
ಇಂದು ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಅಧ್ಯಾತ್ಮ ಯಾವುದೇ ಇರಲಿ. ಅದು ನಮ್ಮ ಹಿರಿಯರಿಂದ ನಮಗೆ ಸಿಕ್ಕಿದ ಬಳುವಳಿ. ಯಾವುದೂ ಏಕಾಏಕಿ ನಮ್ಮ ಕೈ ಸೇರಲಿಲ್ಲ. ಅವರ ಕೈಯಿಂದ ನಮ್ಮ ಕೈಗೆ, ನಮ್ಮಿಂದ ಮುಂದಿನ ತಲೆಮಾರಿಗೆ ಹಸ್ತಾಂತರಗೊಳ್ಳುತ್ತದೆ. ಈ ಸಂದರ್ಭದಲ್ಲಿ ಅದು ಬೆಳೆಯುತ್ತಾ, ಅಭಿವೃದ್ಧಿಯಾಗುತ್ತಾ ಹೋಗುತ್ತದೆ. ನಾವಿಂದು ಮೊಬೈಲ್, ಇಂಟರ್‌ನೆಟ್ ಉಪಯೋಗಿಸುತ್ತಿದ್ದರೆ ಅದರ ಹಿಂದೆ ನಮ್ಮ ಹಿರಿಯರ ತ್ಯಾಗ ಬಲಿದಾನಗಳಿವೆ. ಒಂದು ಮನೆ ಎಂದರೂ ಅಷ್ಟೇ. ಹಿರಿಯರ ಶ್ರಮ, ತ್ಯಾಗದಿಂದ ಆ ಮನೆ ನಿಂತಿದೆ. ಆ ಹಿರಿಯರನ್ನು ನಿರ್ಲಕ್ಷಿಸುವುದು, ಬೀದಿಪಾಲು ಮಾಡುವುದು ಎಂದರೆ, ಭವಿಷ್ಯದಲ್ಲಿ ನಮ್ಮನ್ನು ನಾವೇ ಬೀದಿ ಪಾಲು ಮಾಡಿದಂತೆ. ಮನೆಯಲ್ಲಿ ಆತ್ಮಾಭಿಮಾನದಿಂದ ಬದುಕುವುದು ವೃದ್ಧರ ಹಕ್ಕು. ಹಿರಿಯರೂ ಈ ಬಗ್ಗೆ ಮಾಹಿತಿಗಳನ್ನು ತಮ್ಮದಾಗಿಸಿಕೊಳ್ಳುತ್ತಾ ಕೀಳರಿಮೆಗಳಿಂದ ಹೊರಬರಬೇಕು. ಹೆಚ್ಚಿನವರಿಗೆ ಈ ಕುರಿತ ಸರಕಾರದ ಕಾನೂನಿನ ಅರಿವೂ ಇಲ್ಲ. ಕಾನೂನಿನ ಕುರಿತಂತೆ ಅರಿವಿದ್ದರೂ ತಮ್ಮ ಸ್ವಂತ ಮಕ್ಕಳ ವಿರುದ್ಧ ಯಾವ ಪಾಲಕರಾದರೂ ನ್ಯಾಯಾಲಯದ ಮೆಟ್ಟಿಲು ಹತ್ತುವ ಸಾಧ್ಯತೆಗಳಿವೆಯೇ? ದೈಹಿಕವಾಗಿ ಅಶಕ್ತರೂ, ಆರ್ಥಿಕವಾಗಿ ಪರಾವಲಂಬಿಗಳೂ ಆಗಿರುವ ಇವರು ನ್ಯಾಯಾಲಯದ ಮೆಟ್ಟಿಲು ಹತ್ತಿ ನ್ಯಾಯವನ್ನು ಪಡೆಯುವಷ್ಟರಲ್ಲಿ ಅವರು ಬದುಕಿರುವ ಸಾಧ್ಯತೆಗಳೇ ಕಡಿಮೆ.
ಇತ್ತೀಚೆಗೆ ವೃದ್ಧ ದಂಪತಿ ನ್ಯಾಯಾಲಯದ ಮೆಟ್ಟಿಲೇರಿ ‘‘ನಮಗೆ ದಯಾಮರಣವನ್ನು ಪಾಲಿಸಿ’’ ಎಂದು ಮನವಿ ಮಾಡಿದರು. ಈ ಮನವಿ, ನಮ್ಮ ಕೌಟುಂಬಿಕ ಸಂಬಂಧಗಳ ದುರಂತಕ್ಕೆ ಹಿಡಿದ ಕನ್ನಡಿಯಾಗಿದೆ. ಒಂದಂತೂ ನಿಜ. ಯಾವ ಕಠಿಣ ಕಾನೂನುಗಳೂ ವೃದ್ಧರಿಗೆ ನ್ಯಾಯವನ್ನು ಪರಿಪೂರ್ಣವಾಗಿ ನೀಡಲಾರವು. ಒಬ್ಬ ಮಗ ತನ್ನ ತಂದೆಗೆ ಅನ್ಯಾಯ ಮಾಡಿದರೆ, ಆತನನ್ನು ಬೀದಿಗೆ ತಳ್ಳಿದರೆ ಅದಕ್ಕೆ ವಿಧಿಸಬಹುದಾದ ಆರುತಿಂಗಳ ಶಿಕ್ಷೆ ತೀರಾ ಅಲ್ಪ. ಮುಂದೊಂದು ದಿನ ತಾನು ತನ್ನ ಮಕ್ಕಳಿಂದ ತಿರಸ್ಕೃತನಾಗುವುದೇ ಪ್ರಕೃತಿ ಅವನಿಗೆ ನೀಡಬಹುದಾದ ಅತ್ಯುತ್ತಮ ಶಿಕ್ಷೆ. ವೃದ್ಧಾಶ್ರಮಗಳು ಹೆಚ್ಚುತ್ತಿರುವುದರಿಂದ ವೃದ್ಧರ ಬದುಕು ಒಂದಿಷ್ಟು ಸಹ್ಯವಾಗಬಹುದು. ಆದರೆ, ವೃದ್ಧಾಶ್ರಮಗಳು ಅಂತಿಮವಾಗಿ ಮನುಷ್ಯ ಸಂಬಂಧದ ವೈಫಲ್ಯದ ಸಂಕೇತಗಳಾಗಿವೆ. ಜಗತ್ತಿನಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಇಳಿಮುಖವಾಗಬೇಕು. ತಮ್ಮ ತಮ್ಮ ಹಿರಿಯರನ್ನು ತಾವೇ ಪೋಷಿಸಿ, ಆರೈಕೆ ಮಾಡುವ ಭಾಗ್ಯ ಯುವಕರದ್ದಾಗಬೇಕು. ಹಾಗೆಯೇ ಸರಕಾರದ ಕಾನೂನುಗಳಿಗೆ ಹೆದರಿ ಪೋಷಕರನ್ನು ಸಾಕುವ ಬದಲು ಹೃದಯದ ಕಾನೂನಿಗೆ ಬಾಗಿ ಅವರನ್ನು ತೆಕ್ಕೆಗೆ ತೆಗೆದುಕೊಳ್ಳಬೇಕು. ಹೆತ್ತವರಿಗೆ ಸಂಬಂಧಿಸಿ ಸರಕಾರ ಕಾನೂನು ತಿದ್ದು ಪಡಿ ಮಾಡಲು ಹೊರಟಿರುವುದು ಸಂತೋಷದ ಸಂಗತಿ. ಆದರೆ, ನಶಿಸುತ್ತಿರುವ ಕುಟುಂಬ ವೌಲ್ಯಗಳನ್ನು ಮತ್ತೆ ಮೇಲೆತ್ತಲು ಯಾವ ಕ್ರಮ ತೆಗೆದುಕೊಳ್ಳಬಹುದು ಎನ್ನುವುದರ ಬಗ್ಗೆ ಸರಕಾರ ಮಾತ್ರವಲ್ಲ, ಸಮಾಜವೂ ಚಿಂತಿಸಬೇಕು. ವೃದ್ಧರು ಮತ್ತು ಯುವಕರ ನಡುವೆ ಹೆಚ್ಚಾತ್ತಿರುವ ಬಿರುಕುಗಳನ್ನು ತುಂಬುವ ಕೆಲಸಗಳು ಬೇರೆ ಬೇರೆ ರೂಪದಲ್ಲಿ ನಡೆಯಬೇಕು.







