ಕಸೌಲಿಯಲ್ಲಿ ಗುಂಡಿನ ದಾಳಿ: ಗಾಯಾಳು ಅಧಿಕಾರಿ ಮೃತ್ಯು

ಶಿಮ್ಲಾ, ಮೇ 14: ಕಸೌಲಿ ಪಟ್ಟಣದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಗುಂಡಿನ ದಾಳಿಗೆ ಒಳಗಾಗಿ ತೀವ್ರ ಗಾಯಗೊಂಡಿದ್ದ ಮತ್ತೊಬ್ಬ ಅಧಿಕಾರಿ 12 ದಿನಗಳ ಬಳಿಕ ಮೃತಪಟ್ಟಿದ್ದು, ದುಷ್ಕರ್ಮಿಗಳ ದಾಳಿಗೆ ಬಲಿಯಾದ ಅಧಿಕಾರಿಗಳ ಸಂಖ್ಯೆ ಎರಡಕ್ಕೇರಿದೆ.
ಮೇ 1ರಂದು ನಡೆದ ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಹಿಮಾಚಲ ಪ್ರದೇಶ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ ಗಾಯಗೊಂಡಿದ್ದರು. ಘಟನೆಯಲ್ಲಿ ನಗರ ಯೋಜನಾಧಿಕಾರಿ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಘಟನೆ ವ್ಯಾಪಕ ಜನಾಕ್ರೋಶ ಮತ್ತು ಸುಪ್ರೀಂಕೋರ್ಟ್ ಕೆಂಗಣ್ಣಿಗೆ ಗುರಿಯಾಗಿತ್ತು.
ಚಂಡೀಗಢ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುಲಾಬ್ ಸಿಂಗ್ (46) ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಅತಿಥಿಗೃಹವನ್ನು ಕೆಡವುವಂತೆ ಸುಪ್ರೀಂಕೋರ್ಟ್ ನೀಡಿದ ಆದೇಶದ ಅನ್ವಯ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅತಿಥಿಗೃಹದ ಮಾಲಕನ ಪುತ್ರ ವಿಜಯ್ ಸಿಂಗ್ ಠಾಕೂರ್ ಎಂಬಾತ ಅಧಿಕಾರಿಗಳತ್ತ ಗುಂಡು ಹಾರಿಸಿದ್ದ ಎಂದು ಆಪಾದಿಸಲಾಗಿದೆ.
ನಗರ ಯೋಜನಾಧಿಕಾರಿ ಶೈಲಬಾಲಾ ಶರ್ಮಾ ಸ್ಥಳದಲ್ಲೇ ಮೃತಪಟ್ಟಿದ್ದರೆ, ಸಿಂಗ್ ಅವರ ಹೃದಯದೊಳಕ್ಕೆ ಗುಂಡು ನಾಟಿ ತೀವ್ರ ಗಾಯಗೊಂಡಿದ್ದರು. ಆರೋಪಿಯನ್ನು ಎರಡು ದಿನಗಳ ಬಳಿಕ ಬಂಧಿಸಲಾಗಿತ್ತು.







