ಏಷ್ಯಾ ಮಾಧ್ಯಮ ಶೃಂಗಸಭೆ: ಪಾಕ್ ಪತ್ರಕರ್ತೆಗೆ ಪ್ರವೇಶ ನಿಷೇಧ ?

ಲಾಹೋರ್, ಮೇ 14: ಪಾಕಿಸ್ತಾನದ ಖ್ಯಾತ ಲೇಖಕ ಫೈಝ್ ಅಹ್ಮದ್ ಫೈಝ್ ಅವರ ಪುತ್ರಿಗೆ ನವದೆಹಲಿಯಲ್ಲಿ ನಡೆದ ಮಾಧ್ಯಮ ಶೃಂಗಸಭೆಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆಪಾದಿಸಲಾಗಿದೆ.
ಮೊನೀಝಾ ಹಶ್ಮಿ (72) ಪಾಕಿಸ್ತಾನದ ಖ್ಯಾತ ಟಿವಿ ಮತ್ತು ಮಾಧ್ಯಮ ಪ್ರತಿನಿಧಿಯಾಗಿದ್ದು, ಇವರನ್ನು ಮೇ 10ರಿಂದ 12ರವರೆಗೆ ದೆಹಲಿಯಲ್ಲಿ ನಡೆದ 15ನೇ ಏಷ್ಯಾ ಮಾಧ್ಯಮ ಶೃಂಗಸಭೆಗೆ ಭಾಷಣಕಾರರಾಗಿ ಆಹ್ವಾನಿಸಲಾಗಿತ್ತು. ಆಕೆ ಆಗಮಿಸಿದಾಗ ಪ್ರವೇಶ ನಿರಾಕರಿಸಲಾಯಿತು ಎನ್ನಲಾಗಿದೆ. ಆದರೆ ಇಂಥ ಘಟನೆ ನಡೆದದ್ದು ತಮ್ಮ ಗಮನಕ್ಕೇ ಬಂದಿಲ್ಲ ಎಂದು ಸಂಘಟಕರು ಹೇಳಿಕೊಂಡಿದ್ದಾರೆ. ಪಿಐಬಿ ಮುಖ್ಯಸ್ಥ ಸೀತಾಂಶು ಕಾರ್ ಕೂಡಾ ಇಂಥ ಘಟನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶೃಂಗಸಭೆಯಲ್ಲಿ ಭಾಗವಹಿಸದಂತೆ ತನ್ನನ್ನು ತಡೆಯಲಾಗಿದೆ ಎಂದು ಆಪಾದಿಸಿದ ಹಶ್ಮಿ ಲಾಹೋರ್‌ಗೆ ವಾಪಸ್ಸಾಗಿದ್ದರು. "ಏಷ್ಯಾ ಫೆಸಿಫಿಕ್ ಇನ್‌ಸ್ಟಿಟ್ಯೂಟ್ ಆಫ್ ಬ್ರಾಡ್‌ಕಾಸ್ಟಿಂಗ್ ಡೆವೆಲಪ್‌ಮೆಂಟ್ (ಎಬಿಐಡಿ) ನನ್ನನ್ನು ಈ ಸಮ್ಮೇಳನಕ್ಕೆ ಆಹ್ವಾನಿಸಿತ್ತು. ಆದರೆ ಭಾರತೀಯ ಅಧಿಕಾರಿಗಳು ಸಮ್ಮೇಳನದಲ್ಲಿ ಭಾಗವಹಿಸದಂತೆ ತಡೆ ಒಡ್ಡಿದರು" ಎಂದು ಲಾಹೋರ್‌ನಲ್ಲಿ ಅವರು ಆಪಾದಿಸಿದ್ದಾರೆ.
"ಎಲ್ಲ ಒಳ್ಳೆಯ ಸುದ್ದಿಗಳೂ ವ್ಯಾವಹಾರಿಕವಾಗಿ ಯಶಸ್ವಿಯೇ ಎಂಬ ಬಗ್ಗೆ ಮಾತನಾಡಲು ಸೂಚಿಸಲಾಗಿತ್ತು. ಆದರೆ ಸಮ್ಮೇಳನಕ್ಕೇ ನನಗೆ ಪ್ರವೇಶ ನಿರಾಕರಿಸಲಾಗಿತ್ತು" ಎಂದು ದೂರಿದ್ದಾರೆ. ಮೇ 9ರಂದು ನವದೆಹಲಿಗೆ ತಾವು ಆಗಮಿಸಿದ್ದರೂ, ಹೋಟೆಲ್ ಕಾಯ್ದಿರಿಸಿರಲಿಲ್ಲ ಅಥವಾ ನೋಂದಣಿಯನ್ನೂ ಮಾಡಿರಲಿಲ್ಲ ಎಂದು ದೂರಿದ್ದಾರೆ.
ಸಂಘಟಕರು ಕೊನೆಗೆ ಕ್ಷಮೆ ಯಾಚಿಸಿದರು. ನಾನು ಮತ್ತೊಂದು ಹೋಟೆಲ್‌ನಲ್ಲಿ ಉಳಿದುಕೊಂಡು 12ರಂದು ಲಾಹೋರ್‌ಗೆ ವಾಪಸ್ಸಾಗಿದ್ದಾಗಿ ಹೇಳಿಕೊಂಡಿದ್ದಾರೆ. ಈ ಮಾಧ್ಯಮ ಶೃಂಗಸಭೆಯಲ್ಲಿ 40 ದೇಶಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.







