ಮಂಗಳೂರು- ಚಿತ್ರದುರ್ಗ ರಸ್ತೆಗೆ ಕಾಯಕಲ್ಪ

ಹೊಸದಿಲ್ಲಿ, ಮೇ 14: ಮಂಗಳೂರು ಮತ್ತು ಚಿತ್ರದುರ್ಗ ನಡುವಿನ ರಸ್ತೆ ಅಭಿವೃದ್ಧಿ ಸೇರಿದಂತೆ ದೇಶದಲ್ಲಿ ಐದು ಹೊಸ ಹೆದ್ದಾರಿಗಳ ನಿರ್ಮಾಣಕ್ಕೆ ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ.
ಪ್ರಮುಖ ಕೈಗಾರಿಕಾ ಮತ್ತು ಉತ್ಪಾದನಾ ಕೇಂದ್ರಗಳನ್ನು ಸಂಪರ್ಕಿಸುವ ಈ ಯೋಜನೆಯಿಂದಾಗಿ 200 ಕಿಲೋಮೀಟರ್ ಅಂತರವನ್ನು ಕಡಿಮೆ ಮಾಡುವ ಉದ್ದೇಶವಿದೆ. ಈಗಾಗಲೇ ಗುರ್‌ಗಾಂವ್ ಮತ್ತು ಮುಂಬೈ ನಡುವೆ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್ ಹೈವೆ ನಿರ್ಮಾಣ ಯೋಜನೆಯನ್ನು ಸರ್ಕಾರ ಘೋಷಿಸಿದ್ದು, ಇದರಿಂದ ಉಭಯ ನಗರಗಳ ನಡುವಿನ ಸಂಚಾರ ಅಂತರ 200 ಕಿಲೋಮೀಟರ್‌ನಷ್ಟು ಕಡಿಮೆಯಾಗಲಿದೆ.
ಹೊಸದಾಗಿ ಘೋಷಿಸಲಾದ ಇತರ ಹೆದ್ದಾರಿಗಳೆಂದರೆ ಭಟಿಂಡಾ- ಕಾಂಡ್ಲಾ, ಭಟಿಂಡಾ- ಅಜ್ಮೀರ್, ರಾಯಪುರ- ವಿಷಾಖಪಟ್ಟಣಂ ಮತ್ತು ಅಂಬಾಲಾ ಕಟಪುತ್ಲಿ. ಇದರೊಂದಿಗೆ ಛತ್ತೀಸ್‌ಗಢ ದರ್ಗ್- ಔರಂಗ್ ನಡುವಿನ ರಸ್ತೆಯನ್ನೂ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಹಾಲಿ ಇರುವ ಕಾರಿಡಾರ್‌ಗಳನ್ನು ವಿಸ್ತರಿಸುವ ಬದಲು ಇನ್ನಷ್ಟು ನೇರ ಗ್ರೀನ್‌ಫೀಲ್ಡ್ ಹೆದ್ದಾರಿಗಳ ನಿರ್ಮಾಣಕ್ಕೆ ಹೆದ್ದಾರಿ ಸಚಿವಾಲಯ ಯೋಚಿಸುತ್ತಿದೆ. ಈ ಮೂಲಕ ಭೂಸ್ವಾಧೀನ ವಿಳಂಬ, ಭೂಮಿ ಪಡೆಯಲು ಆಗುವ ವೆಚ್ಚ ಹಾಗೂ ಒತ್ತುವರಿ ತೆರವು ನಿರ್ಮಾಣಕ್ಕೆ ಇರುವ ಅಡೆತಡೆಗಳನ್ನು ನಿವಾರಿಸಲು ಸಾಧ್ಯವಾಗಲಿದೆ ಎಂದು ಮೂಲಗಳು ಹೇಳಿವೆ.
ಭಟಿಂಡಾ ಮತ್ತು ಕಾಂಡ್ಲಾ ನಡುವಿನ ಹೊಸ ಗ್ರೀನ್‌ಫೀಲ್ಡ್ ಹೆದ್ದಾರಿ ನಿರ್ಮಾಣದಿಂದಾಗಿ ಉಭಯ ನಗರಗಳ ನಡುವಿನ ಸಂಚಾರ ಅಂತರ 1100 ಕಿಲೋಮೀಟರ್‌ನಿಂದ 900 ಕಿಲೋಮೀಟರ್‌ಗೆ ಇಳಿಯಲಿದೆ. ಈ ಹೆದ್ದಾರಿ ಹನುಮಾನ್‌ಗಢ, ಬಿಕನೇರ್, ಜೋಧ್‌ಪುರ, ಬರ್ಮೆರ್ ಮತ್ತು ಸಾಂಚೋರ್ ಮೂಲಕ ಹಾದುಹೋಗಲಿದೆ. ಈ ಪ್ರಸ್ತಾವಿತ ಚತುಷ್ಪಥ ಹೆದ್ದಾರಿ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಹೊಸ ಪ್ರದೇಶದಲ್ಲಿ ಅಭಿವೃದ್ಧಿಗೆ ಕಾರಣವಾಗಲಿದೆ.







