ಮೋದಿ ಸರಕಾರ ಉದ್ಯಮಿಗಳ ವಿಶ್ವಾಸ ಕಳೆದುಕೊಂಡಿದೆ
ಪ್ರತಿಷ್ಠಿತ ರಾಯಿಟರ್ಸ್ ಸುದ್ದಿ ಸಂಸ್ಥೆ ಲೇಖನ

ಮುಂಬೈ,ಮೇ.14 : 2014 ರ ಚುನಾವಣೆಯಲ್ಲಿ ನರೇಂದ್ರ ಮೋದಿಯ ಬೆನ್ನಿಗೆ ಬಂಡೆಯಂತೆ ನಿಂತು ಬೆಂಬಲಿಸಿದ್ದ ದೇಶದ ಕಾರ್ಪೊರೇಟ್ ರಂಗ ಈಗ ಮೋದಿ ಬಗ್ಗೆ ಭ್ರಮನಿರಸನಗೊಂಡಿದೆ ಎಂದು ಪ್ರತಿಷ್ಠಿತ ರಾಯಿಟರ್ಸ್ ಸುದ್ದಿ ಸಂಸ್ಥೆ ಸುದ್ದಿ ಪ್ರಕಟಿಸಿದೆ.
ಆ ಸುದ್ದಿಯ ಸಾರಾಂಶ ಇಲ್ಲಿದೆ :
ಕಳೆದ ಲೋಕಸಭಾ ಚುನಾವಣೆ 2014ರಲ್ಲಿ ನಡೆದು ನರೇಂದ್ರ ಮೋದಿ ಜಯಭೇರಿ ಬಾರಿಸಿದಾಗ ಅವರು ಮತ್ತೆ ಮುಂದಿನ ಎರಡು ಚುನಾವಣೆಗಳಲ್ಲಿ ಗೆಲ್ಲಿಯೇ ಗೆಲ್ಲುತ್ತಾರೆಂದೇ ಎಲ್ಲರೂ ನಂಬಿದ್ದರು. ಆದರೆ ಈಗ ಮುಂದಿನ ಲೋಕಸಭಾ ಚುನಾವಣೆಗೆ ಇನ್ನೇನು ಒಂದು ವರ್ಷವಿದೆಯೆನ್ನುವಾಗಿ ದೇಶದ ಉದ್ಯಮ ರಂಗವು ಅವರು ಇನ್ನೊಂದು ಅವಧಿಗೆ ಆಯ್ಕೆಯಾಗುತ್ತಾರೆಂಬುದರ ಬಗ್ಗೆ ಸಂಶಯ ಹೊಂದಿದೆ. ಮೋದಿ ವಿರುದ್ಧ ಅಧಿಕಾರಿಗಳು ಗೊಣಗುತ್ತಿದ್ದಾರೆ ಹಾಗೂ ಅವರು ಅಧಿಕಾರಕ್ಕೆ ಇನ್ನೊಂದು ಅವಧಿಗೆ ಅಂಟಿಕೊಳ್ಳಲಲು ಸಾಧ್ಯವೇ ಎಂದು ಚಿಂತಿಸುತ್ತಿದ್ದಾರೆ. ಸರಕಾರ ಹಾಗೂ ದೊಡ್ಡ ಉದ್ಯಮಿಗಳ ನಡುವಣ ವಿಶ್ವಾಸ ಕಡಿಮೆಯಾಗುತ್ತಿದೆ.
ಆದರೆ ಸಾಮಾನ್ಯ ಮತದಾರರು ಮಾತ್ರ ಇನ್ನೂ ಈ ನಿಟ್ಟಿನಲ್ಲಿ ಯೋಚಿಸಲಾರಂಭಿಸಿಲ್ಲವೆಂದು ಅನಿಸುತ್ತಿದೆ. ಹಲವಾರು ರಾಜ್ಯ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿ 29 ರಾಜ್ಯಗಳ ಪೈಕಿ 22ರಲ್ಲಿ ಅಧಿಕಾರದಲ್ಲಿದೆ. ಕರ್ನಾಟಕ ಚುನಾವಣೆಯ ಫಲಿತಾಂಶವನ್ನು ಇದೀಗ ಕಾತುರದಿಂದ ಎದುರು ನೋಡಲಾಗುತ್ತಿದೆ.
ಅಧಿಕಾರಿಗಳ ಮಟ್ಟದಲ್ಲಿರುವ ಅಸಮಾಧಾನಕ್ಕೂ ದೇಶದ ಆರ್ಥಿಕ ಸ್ಥಿತಿಗತಿಗೂ ತಾಳೆಯಾಗುತ್ತಿಲ್ಲ. ಆರ್ಥಿಕ ಅಭಿವೃದ್ಧಿಯ ಮಾನದಂಡಗಳಲ್ಲಿ ಉತ್ತಮ ಪ್ರಗತಿಯಾಗಿದೆ. ಗರಿಷ್ಠ ಅಭಿವೃದ್ಧಿ ಸೂಚ್ಯಂಕವೂ ವಾರ್ಷಿಕ 7.2ರಷ್ಟಿದೆ.
ಆದರೂ ಅಧಿಕಾರಿಗಳೇಕೆ ಆಶಾಭಾವನೆ ಹೊಂದಿಲ್ಲ ? ಆರ್ಥಿಕ ಬಿಕಟ್ಟು ತಲೆದೋರುವ ಸಾಧ್ಯತೆಯಿದೆಯೆಂದು ಒಬ್ಬ ಬ್ಯಾಂಕರ್ ಪ್ರತಿಕ್ರಿಯಿಸಿದ್ದಾರೆ. ಪರಿಸ್ಥಿತಿ ಹೇಗಿದೆಯೆಂದರೆ ಎಎಎಗಿಂತ ಕಡಿಮೆ ರೇಟಿಂಗ್ ಇರುವವರಿಗೆ ಸಾಲ ನೀಡಲೂ ಬ್ಯಾಂಕ್ ಗಳು ಹೆದರುತ್ತಿವೆ. ಭಾರತೀಯರು ಉದ್ಯಮ ನಡೆಸುತ್ತಿರುವ ರೀತಿಯನ್ನೇ ಮೋದಿ ಅಲುಗಾಡಿಸಿದ್ದಾರೆನ್ನಲಾಗುತ್ತದೆ. ಸ್ವಚ್ಛ ಆಡಳಿತ ಹಾಗೂ ಅನುತ್ಪಾದಕ ಸಾಲಗಳ ಮೇಲಿನ ಹೆಚ್ಚಿನ ಗಮನದಿಂದಾಗಿ ಸಾರ್ವಜನಿಕ ರಂಗದ ಸಂಸ್ಥೆಗಳು ಯಾವುದೇ ನಿರ್ಧಾರ ಕೈಗೊಳ್ಳುವುದಕ್ಕೆ ಅಂಜುತ್ತಿವೆ.
ಐಸಿಐಸಿಐ ಬ್ಯಾಂಕ್ ಸಿಇಒ ಪ್ರಕರಣಕ್ಕೆ ಹೆಚ್ಚು ಗಮನ ನೀಡುವಿಕೆ ನೀರವ್ ಮೋದಿ ಪ್ರಕರಣದಿಂದ ಜನರ ಗಮನ ಬೇರೆಡೆ ಸೆಳೆಯುವ ಯತ್ನವಾಗಿದ್ದಿರಲೂಬಹುದು ಎಂದೂ ಕೆಲವರು ಹೇಳುತ್ತಿದ್ದಾರೆ.
ಬ್ಯಾಂಕುಗಳ ಅನುತ್ಪಾದಕ ಸಾಲಗಳ ಹೆಚ್ಚಳಕ್ಕೆ ವಿತ್ತ ಸಚಿವ ಜೇಟ್ಲಿ ರಿಸರ್ವ್ ಬ್ಯಾಂಕನ್ನು ದೂರಿದ್ದರೆ, ಸಾರ್ವಜನಿಕ ರಂಗದ ಬ್ಯಾಂಕುಗಳನ್ನು ನಿಯಂತ್ರಿಸಲು ತನಗೆ ಹೆಚ್ಚಿನ ಅಧಿಕಾರ ಬೇಕೆಂದು ರಿಸರ್ವ್ ಬ್ಯಾಂಕ್ ಹೇಳುತ್ತಿದೆ.
ಖಾಸಗಿ ರಂಗದಲ್ಲಿ ಹೂಡಿಕೆಗಳು ಕಡಿಮೆಯಾಗಿವೆ. ತೀರಾ ಇತ್ತೀಚಿಗಿನ ಆರ್‍ಬಿಐ ಮಾಹಿತಿಯ ಪ್ರಕಾರ ಈ ನಿಟ್ಟಿನಲ್ಲಿ ಸ್ವಲ್ಪ ಸುಧಾರಣೆಯಾಗುತ್ತಿದೆ. ಅಷ್ಟಕ್ಕೂ ದೇಶದಲ್ಲಿ ಚುನಾವಣಾ ಪ್ರಚಾರ ಒಂದು ದುಬಾರಿ ವ್ಯವಹಾರವಾದರೂ ಪ್ರಧಾನಿಗೆ ಚುನಾವಣೆ ಗೆಲ್ಲಲು ದೊಡ್ಡ ಉದ್ಯಮಿಗಳ ಮತಗಳು ಅಗತ್ಯವಿಲ್ಲ.
ಆದರೆ ಪ್ರತಿ ವರ್ಷ ಉದ್ಯೋಗಕ್ಕೆ ಸಿದ್ಧರಾಗಿರುವ 1.5 ಕೋಟಿ ಜನರಿರುವ ದೇಶದಲ್ಲಿ ದೊಡ್ಡ ಉದ್ಯಮಗಳು ಉದ್ಯೋಗಗಳನ್ನು ಸೃಷ್ಟಿಸುವ ಅಗತ್ಯವಿದೆ. ದೊಡ್ಡ ಉದ್ಯಮಗಳು ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿ ಮಾಡದೇ ಇದ್ದಲ್ಲಿ ಅಧಿಕಾರಿಗಳು ಹಾಗೂ ಉದ್ಯಮಿಗಳು ಮಾತ್ರವಲ್ಲ, ಜನಸಾಮಾನ್ಯರೂ ಸರಕಾರದ ಬಗ್ಗೆ ಭ್ರಮನಿರಸನ ಹೊಂದುತ್ತಾರೆ.







