ಕಾಂಗ್ರೆಸ್ ಯುದ್ಧಕ್ಕೂ ಮುನ್ನ ಶಸ್ತ್ರ ತ್ಯಾಗ ಮಾಡಿದೆ: ಸಿಟಿ ರವಿ

ಚಿಕ್ಕಮಗಳೂರು, ಮೇ 14: ಬಿಜೆಪಿ ಪಕ್ಷದ ಆಂತರಿಕ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತ. ಅದೇ ರೀತಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ನನ್ನ ಗೆಲುವು ನಿಶ್ಚಿತ ಎಂದು ಬಿಜೆಪಿ ಅಭ್ಯರ್ಥಿ ಸಿ.ಟಿ.ರವಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಚುನಾವಣೆ ವೇಳೆ ಜನರಿಗೆ ನೀಡುವ ಅಭಿವೃದ್ಧಿ ಯೋಜನೆಗಳಿಗಿಂತ ನನ್ನ ವೈಯಕ್ತಿಕ ತೇಜೋವಧೆ ಮಾಡುವುದರಲ್ಲೇ ಕಾಲ ಕಳೆದರು. ಇದು ತನಗೆ ಅತೀವ ಬೇಸರ ತಂದಿದೆ. ಕ್ಷೇತ್ರದಲ್ಲಿ ನಾನೆಂದಿಗೂ ದ್ವೇಷದ ರಾಜಕಾರಣ ಮಾಡಿಲ್ಲ. ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಕರಪತ್ರ ಹಂಚಿದರು. ಜನರಲ್ಲಿ ತಪ್ಪು ಕಲ್ಪನೆ ತರುವ ಷಡ್ಯಂತ್ರವನ್ನೂ ಮಾಡಿದರು. ಸುಸಂಸ್ಕೃತ ಜಿಲ್ಲೆ ಎನಿಸಿಕೊಂಡಿರುವ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಅನುಸರಿಸಿದ ಮಾರ್ಗ ಸರಿಯಲ್ಲ, ಇದು ನನಗೆ ನೋವುಂಟು ಮಾಡಿದೆ. ಅಕ್ರಮ ಆಸ್ತಿ ಮಾಡಿದ್ದೇನೆ ಎಂದು ಆರೋಪಿಸಿರುವ ಅವರು ಅಕ್ರಮ ಆಸ್ತಿ ಇದ್ದರೆ ಬಹಿರಂಗ ಪಡಿಸಲಿ ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಜನತೆಯಲ್ಲಿ ಮೂಡಿಸಿದ ತಪ್ಪು ಕಲ್ಪನೆ ವರ್ಕ್‍ಔಟ್ ಆಗಲಿಲ್ಲ. ಜಾತಿ ಹೆಸರಿನಲ್ಲಿ ಕಾಂಗ್ರೆಸ್, ಜೆಡಿಎಸ್‍ನವರು ಗೆದ್ದು ಬಿಡುತ್ತೇವೆಂಬ ಭ್ರಮೆಯಲ್ಲಿದ್ದಾರೆ. ಜಾತಿಯಿಂದ ಜನನಾಯಕರಾಗಲು ಸಾಧ್ಯವಿಲ್ಲ, ಸಾಮಾಜಿಕ ಕಾರ್ಯ, ಹೋರಾಟದಿಂದ ಮಾತ್ರ ಜನನಾಯಕರಾಗಲು ಸಾಧ್ಯ. ಕ್ಷೇತ್ರ ಜನತೆ ಜಾತಿ ಮೀರಿ ಮತದಾನ ಮಾಡಿದ್ದಾರೆ. ಮೂರು ಬಾರಿ ಕ್ಷೇತ್ರದ ಜನತೆ ಕೈ ಹಿಡಿದಿದ್ದಾರೆ. ತನ್ನ ಕಾರ್ಯಚಟುವಟಿಕೆ ಹಾಗೂ ನಡವಳಿಕೆಯನ್ನು ಒಪ್ಪಿಕೊಂಡಿದ್ದಾರೆ. ಈ ಬಾರಿಯೂ 75 ಸಾವಿರ ಮತಗಳನ್ನು ಪಡೆದು ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ಸಿಗರು ಯುದ್ಧಕ್ಕೂ ಮುಂಚೆಯೇ ಶಸ್ತ್ರತ್ಯಾಗ ಮಾಡಿದರು. ಯುದ್ಧಕ್ಕೂ ಮುಂಚೆಯೇ ಬಳಸಿದ ಕತ್ತಿ, ನನ್ನ ಮೇಲಿನ ಟೀಕೆ, ಮತಗಟ್ಟೆವರೆಗೂ ರೀಚ್ ಆಗಲೇ ಇಲ್ಲ. ಕಾಂಗ್ರೆಸ್ ಪಕ್ಷದ ಬೂತ್‍ಮಟ್ಟದ ಕಾರ್ಯಕರ್ತರು ಬಹಿರಂಗವಾಗಿಯೇ ಜೆಡಿಎಸ್ ಪರ ನಿಂತರು. ಕಾಂಗ್ರೆಸ್ 2ನೇ ಸ್ಥಾನವನ್ನು ಕಳೆದು ಕೊಳ್ಳವ ಸ್ಥಿತಿಯಲ್ಲಿದೆ ಎಂದು ವ್ಯಂಗ್ಯವಾಡಿದರು.
ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ರಾಜಕಾರಣ ಮಾಡುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜಕೀಯ ವ್ಯಭಿಚಾರ ನಡೆದಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರ ಕಾಲ್ ಲೀಸ್ಟ್ ತೆಗೆಸಿದರೆ ಇದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಸರಕಾರದಿಂದ ಜಿಲ್ಲೆಗೆ ಆದ ಅನ್ಯಾಯವನ್ನು ಸರಿಪಡಿಸಿ ನೀರಾವರಿ ಯೋಜನೆ, ಮೆಡಿಕಲ್ ಕಾಲೇಜು ಆರಂಭಕ್ಕೆ ಆದ್ಯತೆ ನೀಡಲಾಗುವುದು ಎಂದ ಸಿಟಿ ರವಿ, ಜಿಲ್ಲೆಯ ಐದು ಕ್ಷೇತ್ರದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು.
ಸುದ್ದಿಗೊಷ್ಠಿಯಲ್ಲಿ ಬಿಜೆಪಿ ಮುಖಂಡರಾದ ತಮ್ಮಯ್ಯ, ಜಿಪಂ ಸದಸ್ಯ ಸೋಮಶೇಖರ್, ವರಸಿದ್ಧಿ ವೇಣುಗೋಪಾಲ್ ಉಪಸ್ಥಿತರಿದ್ದರು.
ಸಿಎಂ ಸಿದ್ದರಾಮಯ್ಯರವರು ಈಗ ದಲಿತ ಮುಖ್ಯಮಂತ್ರಿ ದಾಳ ಉರುಳಿಸುತ್ತಿದ್ದಾರೆ. ಚುನಾವಣೆ ಪ್ರಚಾರದಲ್ಲಿ ನಾನೇ ಸಿಎಂ ಮುಂದೆಯೂ ನಾನೇ ಸಿಎಂ ಎನ್ನುತ್ತಿದ್ದವರು ದಿಢೀರ್ ದಲಿತ ಮುಖ್ಯಮಂತ್ರಿ ಪ್ರಸ್ತಾಪ ಮಾಡುತ್ತಿರುವುದು ಅವರ ಪಕ್ಷಕ್ಕೆ ಸ್ಪಷ್ಟ ಬಹುಮತ ಬರುವುದಿಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದ ಅವರು, ನಿಜವಾಗಿಯೂ ದಲಿತರ ಮೇಲೆ ಕಾಳಜಿ ಇದ್ದಿದ್ದರೆ ಡಾ.ಜಿ. ಪರಮೇಶ್ವರ್ ರವರಿಗೆ ಮಂತ್ರಿ ಹುದ್ದೆ ನೀಡಲು ಗೋಳಾಡಿಸುತ್ತಿರಲಿಲ್ಲ. ಐದು ವರ್ಷದ ಆಡಳಿತದಲ್ಲಿ ಡಿಸಿಎಂ ಹುದ್ದೆ ಸೃಷ್ಟಿಯಾಗಲಿಲ್ಲ. ಚುನಾವಣಾ ಫಲಿತಾಂಶದಲ್ಲಿ ಬಹುಮತ ಸಿಗದ ಬಗ್ಗೆ ಮುನ್ಸೂಚನೆ ಸಿಕ್ಕಿರುವುದರಿಂದ ಅವರು ದಲಿತ ಸಿಎಂ ದಾಳವನ್ನು ಚುನಾವಣಾ ನಂತರ ಉರುಳಿಸಿದ್ದಾರೆ. ತ್ಯಾಗ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಿಟಿ ರವಿ ಆರೋಪಿಸಿದರು.
'ಜಿಲ್ಲಾಡಳಿತ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಗಮನಹರಿಸಬೇಕು. ಮಳೆ ಬಂದಿದ್ದರೂ ಕೆಲ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಜಿಲ್ಲಾಡಳಿತ ಕುಡಿಯುವ ನೀರಿಗೆ ವಿಶೇಷ ಆದ್ಯತೆ ನೀಡಬೇಕು.'
- ಸಿ.ಟಿ. ರವಿ, ಶಾಸಕ, ಕ್ಷೇತ್ರದ ಬಿಜೆಪಿ ಅಭ್ಯರ್ಥಿ.







