ತುಮಕೂರು: 'ಅನ್ನ ನೀಡಿದ ಅಮ್ಮ ಶ್ರೀಮತಿ ರಾಜಲಕ್ಷ್ಮಿ ಬರಗೂರು; ಒಂದು ನೆನಪು ಕಾರ್ಯಕ್ರಮ'

ತುಮಕೂರು.ಮೇ.14; ತುಮಕೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ರಾಜಲಕ್ಷ್ಮಿ ಹೆಸರಿನಲ್ಲಿ ಚಿನ್ನದ ಪದಕ ನೀಡುವ ಆಲೋಚನೆ ಇದ್ದು, ವಿಶ್ವವಿದ್ಯಾನಿಲಯದವರೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಸಾಹಿತಿ ನಾಡೋಜ ಬರಗೂರು ಪ್ರೊ.ರಾಮಚಂದ್ರಪ್ಪ ತಿಳಿಸಿದ್ದಾರೆ.
ಶಿರಾ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿರಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾನುವಾರ ಆಯೋಜಿಸಿದ್ದ ಅನ್ನ ನೀಡಿದ ಅಮ್ಮ ಶ್ರೀಮತಿ ರಾಜಲಕ್ಷ್ಮಿ ಬರಗೂರು ಒಂದು ನೆನಪು ಕಾರ್ಯಕ್ರಮದಲ್ಲಿ ಪತ್ನಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡುತಿದ್ದ ಅವರು, ಸಾಂಸ್ಕೃತಿಕ ಲೋಕದಲ್ಲಿ ರಾಜಲಕ್ಷ್ಮಿಗೆ ಅಪಾರ ಗೌರವ, ಸ್ಥಾನಮಾನ ಹಾಗೂ ಜನಮನ್ನಣೆ ಲಭಿಸಿದೆ. ಅಂತರ್ಜಾತಿ ವಿವಾಹಿತರಿಗೆ, ವಿದ್ಯಾರ್ಥಿಗಳಿಗೆ, ಸಾಹಿತಿಗಳಿಗೆ, ಪ್ರಗತಿಪರ ಹೋರಾಟಗಾರರಿಗೆ ಅನ್ನಾಶ್ರಯ ನೀಡಿದ್ದಾರೆ. ಅಲ್ಲದೆ ಅವಕಾಶ ವಂಚಿತ ಹೆಣ್ಣುಮಕ್ಕಳ ಬಾಣಂತಿತನ ಮಾಡಿ, ಅವರ ಕಷ್ಟ ಸುಖಗಳಿಗೆ ಆಸರೆಯಾಗಿದ್ದು ರಾಜಲಕ್ಷ್ಮಿಯ ಹೆಗ್ಗಳಿಕೆ ಎಂದರು.
ಪ್ರತಿವರ್ಷ ಸಿನಿಮಾ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಜೀವಮಾನ ಸಾಧನೆಗಾಗಿ ತಲಾ ಒಬ್ಬರಿಗೆ 25 ಸಾವಿರ ರೂ. ಎರಡು ಪ್ರಶಸ್ತಿ ನೀಡಲಾಗುವುದು. ಇವರಲ್ಲಿ ಒಬ್ಬರು ಸಾಹಿತ್ಯ ಕ್ಷೇತ್ರದ ಸಾಧಕರು ಹಾಗೂ ಮತ್ತೊಬ್ಬರು ಸಿನಿಮಾ ಕ್ಷೇತ್ರದ ಸಾಧಕರಿಗೆ ರಾಜಲಕ್ಷ್ಮಿ ಬರಗೂರು ಹೆಸರಿನಲ್ಲಿ ನೀಡಲಾಗುವುದು ಎಂದ ಅವರು, ಈ ಪ್ರಶಸ್ತಿ ಜತೆಗೆ ಆಯಾ ವರ್ಷದ ಒಂದು ಉತ್ತಮ ಕಾದಂಬರಿ ಮತ್ತು ಉತ್ತಮ ವಿಚಾರ-ವಿಮರ್ಶೆ ಕೃತಿಗಳಿಗೆ ‘ಪುಸ್ತಕ ಪ್ರಶಸ್ತಿ’ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅದನ್ನು ಶ್ರೀಮತಿ ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ ಹೆಸರಿನಲ್ಲಿ ನೀಡಲಾಗುವುದು ಎಂದು ಡಾ.ರಾಮಚಂದ್ರಪ್ಪ ನುಡಿದರು.
ಸಂಸ್ಕೃತಿ ಚಿಂತಕ ಬಸವರಾಜ ಕಲ್ಗುಡಿ ಮಾತನಾಡಿ, ಯಾವುದೇ ಸೃಜನಶೀಲ ಬದುಕನ್ನು ಬರಹದಲ್ಲಿ ದಾಖಲಿಸಲು ಸಾಧ್ಯವಿಲ್ಲ. ಚರಿತ್ರೆಯಲ್ಲಿ ಸೃಜನಶೀಲ ಬದುಕನ್ನು ಬರೆಯಲು ಸಾಧ್ಯವಿಲ್ಲ. ಆದರೆ ಆ ಚರಿತ್ರೆಗೆ ರಾಜಲಕ್ಷ್ಮಿ ಅವರು ದೊಡ್ಡ ಸಾಕ್ಷಿಯಾಗಿದ್ದಾರೆ. ಅವರ ಮನೆ ಅನೇಕ ಅಂತರ್ಜಾತಿ ವಿವಾಹಿತರಿಗೆ ಆಶ್ರಯ ತಾಣ. ರಾಜಲಕ್ಷ್ಮಿ ಅವರು ಕುಟುಂಬ ವಲಯದಲ್ಲಿ ಮಾತೃತ್ವವನ್ನು ನಿಭಾಯಿಸುವ ಮೂಲಕ ತಮ್ಮ ಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ. ಅವರಿಗಿರುವ ಮಾತೃ ಹೃದಯದಿಂದಲೇ ಇಂದು ಅವರ ಬಳಗ ಆಲದ ಮರವಾಗಿ ಬೆಳೆದಿದೆ ಎಂದರು.
ಸಾಹಿತಿ ರಾಜಪ್ಪ ದಳವಾಯಿ ಮಾತನಾಡಿ, ಬರಗೂರು ರಾಮಚಂದ್ರಪ್ಪ ಅವರ ಮನೆ ಹಲವರಿಗೆ ಅನ್ನ ನೀಡುವ ಜತೆಗೆ ಅವಕಾಶ ವಂಚಿತರಿಗೆ ಹಲವು ಅವಕಾಶಗಳನ್ನೂ ಕೂಡ ಕಲ್ಪಿಸಿದೆ. ಈ ನಿಟ್ಟಿನಲ್ಲಿ ರಾಜಲಕ್ಷ್ಮಿ ಬರಗೂರರ ಸ್ಮರಣೆ ಮಾಡುವುದು, ಅವರ ಕುಟುಂಬ ಜತೆ ಇರುವುದು ನಮ್ಮ ಹೊಣೆಗಾರಿಕೆ ಅಷ್ಟೇ ಅಲ್ಲದೆ, ಸಾಮಾಜಿಕ ಹೊಣೆಗಾರಿಕೆ ಕೂಡ ಹೌದು. ಕ್ರಾಂತಿಕಾರರು, ಪ್ರಗತಿಪರರು, ಸಂಪ್ರದಾಯಸ್ಥರಿಂದ ಹಿಡಿದು ಎಲ್ಲ ವರ್ಗದವರೂ ಬರಗೂರರಿಗೆ ಸ್ನೇಹಿತರಾಗಿದ್ದಾರೆ. ಅವರ ಜತೆ ಅಸಂಖ್ಯಾತರು ಬರಗೂರರ ಆಶ್ರಯ ಪಡೆದಿದ್ದಾರೆ. ಆದ್ದರಿಂದ ಬರಗೂರರು ನಮ್ಮ ನಡುವಿನ ಅಪರೂಪದ ವ್ಯಕ್ತಿ ಎಂದರು.
ಪತ್ರಕರ್ತ ದೊಡ್ಡಹುಲ್ಲೂರು ರುಕ್ಕೋಜಿ ಮಾತನಾಡಿ, ರಾಜಲಕ್ಷ್ಮಿ ಅವರು ಮೇಷ್ಟ್ರ ಮೂಲಕ ಪರಿಚಯವಾಗಿದ್ದವರನ್ನು ಯಾರನ್ನೂ ಅನ್ಯರೆಂದು ಭಾವಿಸದೆ ಎಲ್ಲರೂ ತಮ್ಮವರೆಂದು ಪ್ರೀತಿಸುತ್ತಿದ್ದರು. ಒಮ್ಮೆ ಅವರ ಬಳಗಕ್ಕೆ ಸೇರ್ಪಡೆಯಾದರೆ ಯಾರನ್ನೂ ಅದು ಕೈಬಿಡುವುದಿಲ್ಲ. ಕುಟುಂಬ ಸರಿ ಇದ್ದರೆ ಇರುತ್ತದೆ. ಮನೆ ಸರಿ ಇದ್ದರೆ ಸಮಾಜ ಸರಿಯಾಗಿರುತ್ತದೆ ಎಂಬುದಕ್ಕೆ ಸಮಾಜ, ಚರ್ಚೆ, ಹೋರಾಟದ ಮೂಲವಾಗಿರುವ ಬರಗೂರು ಅವರ ಕುಟುಂಬ ಹಾಗೂ ಮನೆ ಉದಾಹರಣೆಯಾಗಿದೆ ಎಂದರು.
ಬೂವನಹಳ್ಳಿ ನಾಗರಾಜು, ಹೊನ್ನಗಾನಹಳ್ಳಿ ಕರಿಯಣ್ಣ, ಪ್ರೊ.ಭಕ್ತರಹಳ್ಳಿ ಕಾಮರಾಜ್, ಕಟಾವೀರನಹಲ್ಳಿ ಜನ್ನಪ್ಪ, ಭಕ್ತರಾಮೇಗೌಡ, ಪ್ರೊ. ಹನುಮಂತರಾಯಪ್ಪ ಸೇರಿದಂತೆ ಇತರರು ನುಡಿನಮನ ಸಲ್ಲಿಸಿದರು. ಗಾಯಕಿ ಡಾ.ಶಮಿತಾ ಮಲ್ನಾಡ್ ಅವರು ಗೀತನಮನ ಸಲ್ಲಿಸಿದರು. ಇದಕ್ಕೂ ಮುನ್ನ ಮೈಸೂರಿನ ಡಾ.ರಾಜಕುಮಾರ್ ಫಿಲ್ಮ್ ಇನ್ಸ್‍ಟಿಟ್ಯೂಟ್ ನಿರ್ಮಿಸಿ, ನಟರಾಜ್ ಶಿವು ನಿರ್ದೇಶಿಸಿರುವ ಶ್ರೀಮತಿ ರಾಜಲಕ್ಷ್ಮಿ ಬರಗೂರು ಬದುಕು ಕುರಿತ 'ಅನ್ನ ನೀಡಿದ ಅಮ್ಮ' ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷೆ ಬಾ.ಹ.ರಮಾಕುಮಾರಿ, ಶಿರಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ನಂದೀಶ್ವರ್, ತುಮಕೂರು ವಿವಿ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು, ರಂಗಾರೆಡ್ಡಿ ಕೋಡಿರಾಂಪುರ, ಸುಂದರರಾಜ ಅರಸು ಸೇರಿದಂತೆ ಇತರರು ಉಪಸ್ಥಿತರಿದ್ದರು.







