ತುಮಕೂರು: ಮತ ಎಣಿಕೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ತುಮಕೂರು,ಮೇ.14: ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ನಡೆದ ಮತದಾನ ಮತ ಎಣಿಕೆ ಕಾರ್ಯ ಮೇ.15ರ ಬೆಳಗ್ಗೆ 8 ಗಂಟೆಯಿಂದ ತುಮಕೂರು ವಿವಿಯ ಸರಕಾರಿ ವಿಜ್ಞಾನ ಕಾಲೇಜು, ಕಲಾ ಕಾಲೇಜು ಹಾಗೂ ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಆರಂಭವಾಗಲಿದ್ದು, ಜಿಲ್ಲಾಡಳಿತ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ.
ಜಿಲ್ಲೆಯ ಮೂರು ಉಪವಿಭಾಗಗಳನ್ನು ವಿಂಗಡಿಸಿದ್ದು, ಅದೇ ರೀತಿ ಮತ ಎಣಿಕೆ ಕಾರ್ಯವೂ ನಡೆಯುತ್ತಿದೆ. ಮಧುಗಿರಿ ಉಪವಿಭಾಗದ ಮಧುಗಿರಿ, ಪಾವಗಡ, ಶಿರಾ ಮತ್ತು ಕೊರಟಗೆರೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದರೆ, ತಿಪಟೂರು ಉಪವಿಭಾಗದ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ ತುಮಕೂರು ವಿವಿ ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ. ತುಮಕೂರು ಉಪವಿಭಾಗದ ಕುಣಿಗಲ್, ತುಮಕೂರು ನಗರ, ತುಮಕೂರು ಗ್ರಾಮಾಂತರ,ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ತುಮಕೂರು ವಿವಿಯ ಕಲಾ ಕಾಲೇಜಿನಲ್ಲಿ ನಡೆಯಲಿದೆ.
ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳಿಗೆ ತಲಾ 12,ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಮತ ಎಣಿಕೆಗಾಗಿ 14+1 ಟೇಬಲ್ ಸಿದ್ದಪಡಿಸಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 18 ಮೈಕ್ರೋ ಅಬ್‍ಸರ್ವರ್ ಗಳನ್ನು ನೇಮಕ ಮಾಡಲಾಗಿದೆ. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ರೂಂ ಎಫ್ 90ರಲ್ಲಿ 14+1 ಟೇಬಲ್ ಮತ ಎಣಿಕೆ ನಡೆಯಲಿದೆ. ತಿಪಟೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಎಸ್.122 ನೇ ಕೊಠಡಿಯಲ್ಲಿ ನಡೆಯಲಿದೆ. ತುರುವೇಕೆರೆ ಎಸ್.210, ತುಮಕೂರು ನಗರ ಎಸ್.38ರಲ್ಲಿ ನಡೆಯಲಿದ್ದು, ತಲಾ 14 ಟೇಬಲ್‍ಗಳಲ್ಲಿ ಏಕ ಕಾಲಕ್ಕೆ ಮತ ಎಣಿಕೆ ನಡೆಯಲಿದೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ರೂಂ ಎಫ್.25 ಮತ್ತು 25ರಲ್ಲಿ ನಡೆಯಲಿದ್ದು, ತಲಾ 7 ಟೇಬಲ್‍ಗಳು ಎರಡು ಕೊಠಡಿಯಲ್ಲಿವೆ. ಕೊರಟಗೆರೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೊಠಡಿ ಸಂಖ್ಯೆ 201ರಲ್ಲಿ ನಡೆಯಲಿದ್ದು,14 ಟೇಬಲ್ ಸಿದ್ದಪಡಿಸಲಾಗಿದೆ. ಗುಬ್ಬಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಎಫ್ 27 ಮತ್ತು 29ರಲ್ಲಿ ನಡೆಯಲಿದ್ದು, ಎಫ್ 27ರಲ್ಲಿ 8+1 ಮತ್ತು ಎಫ್. 29ರಲ್ಲಿ 6+1 ಟೇಬಲ್ ಸಿದ್ದಗೊಂಡಿವೆ.
ಮಧುಗಿರಿ ಕ್ಷೇತ್ರದ ಮತ ಎಣಿಕೆ 202 ನಂಬರಿನ ಕೊಠಡಿಯಲ್ಲಿ ಜರುಗಲಿದ್ದು, 14 ಟೇಬಲ್‍ಗಳು ಸಿದ್ದಗೊಂಡಿವೆ. ಶಿರಾ ವಿಧಾನಸಭಾ ಕ್ಷೇತ್ರದ ಮತ ಎಣಿಕೆ 204ರಲ್ಲಿ ನಡೆಯಲಿದ್ದು, 12+1 ಟೇಬಲ್ ಸಿದ್ದಗೊಂಡಿವೆ. ಪಾವಗಡ ವಿಧಾನಸಭಾ ಕ್ಷೇತ್ರದ ಮತ ಎಣಿಕೆ 220 ಮತ್ತು 221ರಲ್ಲಿ ನಡಯಲಿದ್ದು, ತಲಾ 6+1 ಸೇರಿ 12 ಟೇಬಲ್‍ಗಳು ಸಿದ್ದಗೊಂಡಿವೆ. ಕುಣಿಗಲ್ ಕ್ಷೇತ್ರದ ಮತ ಎಣಿಕೆ ಎಸ್.33 ಮತ್ತು 34ರಲ್ಲಿ ನಡೆಯಲಿದ್ದು, ತಲಾ 7+1 ಮತ ಎಣಿಕೆ ಟೇಬಲ್ ಸಿದ್ದಗೊಂಡಿವೆ.
ಒಟ್ಟಾರೆ 11 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 15 ಕೊಠಡಿಗಳಲ್ಲಿ,165 ಟೇಬಲ್‍ಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಇದಕ್ಕಾಗಿ 198 ಮೈಕ್ರೋ ಅಬ್‍ಸರ್ವರ್ ಗಳನ್ನು ನೇಮಿಸಲಾಗಿದೆ. ಇಡೀ ಮತ ಎಣಿಕೆ ಕಾರ್ಯ ಸಂಪೂರ್ಣ ಸಿಸಿ ಟಿವಿ ಕಣ್ಗಾವಲಿನಲ್ಲಿ ನಡೆಯಲಿದೆ.







