ಜಾಹೀರಾತುಗಳಿಗೇ 4343.26 ಕೋ.ರೂ. ವ್ಯಯಿಸಿದ ನರೇಂದ್ರ ಮೋದಿ ಸರಕಾರ
ಆರ್‌ಟಿಐ ಉತ್ತರದಲ್ಲಿ ಬಹಿರಂಗ

ಮುಂಬೈ,ಮೇ 14: ಕೇಂದ್ರ ಸರಕಾರವು ಈವರೆಗೆ ವಿವಿಧ ಮಾಧ್ಯಮಗಳ ಮೂಲಕ ಕೇವಲ ಜಾಹೀರಾತುಗಳು ಮತ್ತು ಪ್ರಚಾರಕ್ಕೇ 4,343.26 ಕೋ.ರೂ.ಗಳನ್ನು ವೆಚ್ಚ ಮಾಡಿದೆ.
ಮೋದಿ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಜಾಹೀರಾತುಗಳು ಮತ್ತು ಪ್ರಚಾರಕ್ಕಾಗಿ ಮಾಡಿರುವ ವೆಚ್ಚದ ವಿವರಗಳನ್ನು ಕೋರಿ ಮುಂಬೈನ ಆರ್‌ಟಿಐ ಕಾರ್ಯಕರ್ತ ಅನಿಲ ಗಲಗಲಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಂದ್ರದ ಬ್ಯೂರೊ ಆಫ್ ಔಟ್‌ರೀಚ್ ಆ್ಯಂಡ್ ಕಮ್ಯುನಿಕೇಷನ್(ಬಿಒಸಿ)ಗೆ ಅರ್ಜಿ ಸಲ್ಲಿಸಿದ್ದರು.
ಬಿಒಸಿಯ ಹಣಕಾಸು ಸಲಹೆಗಾರ ತಪನ್ ಸೂತ್ರಧಾರ ಅವರು ಒದಗಿಸಿರುವ ಉತ್ತರದಂತೆ ಸರಕಾರವು ಜೂನ್ 2014ರಿಂದ ಮಾರ್ಚ್ 2015ರವರೆಗೆ 953.54 ಕೋಟಿ ರೂ.ಗಳನ್ನು ವಿವಿಧ ಮಾಧ್ಯಮಗಳಲ್ಲಿ ಜಾಹೀರಾತು ಮತ್ತು ಪ್ರಚಾರಕ್ಕಾಗಿ ವ್ಯಯಿಸಿದ್ದರೆ,2015-16ನೇ ಸಾಲಿನಲ್ಲಿ 1,171.11 ಕೋ.ರೂ.ಗಳನ್ನು ವೆಚ್ಚ ಮಾಡಿದೆ.
2016-17ನೇ ಸಾಲಿನಲ್ಲಿ 1,263.15 ಕೋ.ರೂ.ಗಳನ್ನು ಮತ್ತು 2017-18ನೇ ಸಾಲಿನಲ್ಲಿ 955.46 ಕೋ.ರೂ.ಗಳನ್ನು ವ್ಯಯಿಸಲಾಗಿದೆ.
ಸಾರ್ವಜನಿಕರ ಹಣವನ್ನು ಜಾಹೀರಾತುಗಳು ಮತ್ತು ಪ್ರಚಾರಕ್ಕಾಗಿ ಅಂದಾದುಂದಿಯಾಗಿ ವ್ಯಯಿಸುತ್ತಿರುವ ವಿರುದ್ಧ ಪ್ರತಿಪಕ್ಷಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಟುಟೀಕೆಗಳು ವ್ಯಕ್ತವಾದ ಬಳಿಕ ಸರಕಾರವು 2016-17ನೇ ಸಾಲಿಗೆ ಹೋಲಿಸಿದರೆ ಈ ವರ್ಷದಲ್ಲಿ ಈ ವೆಚ್ಚದಲ್ಲಿ 307.69 ಕೋ.ರೂ. ಕಡಿತಗೊಳಿಸಿದೆ ಎಂದು ಗಲಗಲಿ ತಿಳಿಸಿದರು.





