ವೈದಿಕರು ಸಾಮಾನ್ಯರನ್ನು ದೂರ ಇಟ್ಟಿದ್ದರಿಂದಲೇ ಬುದ್ಧ-ಬಸವರು ಮುನ್ನಲೆಗೆ ಬಂದಿದ್ದು: ಡಾ.ಪಿ.ವಿ.ನಾರಾಯಣ
ಬೆಂಗಳೂರು, ಮೇ 14: ವೈದಿಕ ಮನಸ್ಥಿತಿಯುಳ್ಳವರು ಸಾಮಾನ್ಯ ಜನರನ್ನು ದೂರ ಇಟ್ಟಿದ್ದರಿಂದಲೇ ಬೌದ್ಧ ಧಮ್ಮ, ಬಸವ ಚಳವಳಿಗಳು ಪ್ರಾರಂಭವಾದವು ಎಂದು ವಿಮರ್ಶಕ ಡಾ.ಪಿ.ವಿ.ನಾರಾಯಣ ಹೇಳಿದ್ದಾರೆ.
ಸೋಮವಾರ ಜಯನಗರದ ವಿಜಯ ಕಾಲೇಜಿನ ಶ್ರೀ ರಾಮಸ್ವಾಮಿ ಸಭಾಂಗಣದಲ್ಲಿ ಬಸವಣ್ಣ-ಪುನರ್ಮನನ ರಾಜ್ಯ ಮಟ್ಟದ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ಮತ್ತು ಆರನೆಯ ಶತಮಾನದಲ್ಲಿ ವೈದಿಕ ಸಂಸ್ಕೃತಿಯ ಪ್ರಭಾವ ಬಹಳವಾಗಿತ್ತು. ಇದೇ ವೇಳೆಯಲ್ಲಿ ಈ ಸಂಸ್ಕೃತಿಯನ್ನು ಹಿಂಬಾಲಿಸುತ್ತಿದ್ದ ಜನರು ಸಾಮಾನ್ಯರನ್ನು ದೂರವಿಡಲು ಪ್ರಾರಂಭಿಸಿದರು. ಹೀಗಾಗಿಯೇ ಸಾಮಾನ್ಯ ಜನರಿಗೂ ಸ್ವಾಭಿಮಾನವನ್ನು ಮೂಡಿಸುವ ಉದ್ದೇಶದಿಂದ ಈ ದೇಶದಲ್ಲಿ ಬೌದ್ಧ ಧಮ್ಮ, ಬಸವ ಚಳವಳಿಗಳು ಪ್ರಾರಂಭವಾದವು ಎಂದು ಹೇಳಿದರು.
ವೈದಿಕ ಸಂಸ್ಕೃತಿಯ ಬಳಿಕ ಅಸ್ತಿತ್ವಕ್ಕೆ ಬಂದ ಜೈನ ಧರ್ಮವು ಕಾಲಕ್ರಮೇಣ ವೈದಿಕ ಸಂಸ್ಕೃತಿಯ ಬಲಿಪಶುವಾಗಿ ವೈದಿಕ ಸಂಸ್ಕೃತಿಯನ್ನೇ ಅಳವಡಿಸಿಕೊಂಡಿತು. ಅಲ್ಲದೆ, ಸ್ವಾಮಿ ವಿವೇಕಾನಂದರು ಹೇಳುವಂತೆ ಶಂಕರಾಚಾರ್ಯರು ಚುರುಕಿನ ಬುದ್ಧಿಯುಳ್ಳವರಾಗಿದ್ದರು. ಆದರೆ ಹೃದಯ ವೈಶ್ಯಾಲತೆ ಇರಲಿಲ್ಲ. ಹೀಗಾಗಿಯೇ ಅವರೂ ವೈದಿಕ ಸಂಸ್ಕೃತಿಗೆ ಮನಸೋತರು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರು, ಇಂದಿನ ದಿನಗಳಲ್ಲಿ ಬಸವಣ್ಣನವರು ರಾಜಕೀಯ ವಸ್ತುವಾಗಿದ್ದು, ರಾಜಕಾರಣಿಗಳು ಬಸವಣ್ಣನವರ ವಚನಗಳನ್ನು ಬಾಯಿಂದ ಹೇಳುತ್ತಿದ್ದಾರೆಯೇ ವಿನಹ ಅವರ ವಚನಗಳ ರೀತಿಯಲ್ಲಿ ನಡೆದುಕೊಳ್ಳುತ್ತಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಜಯ ಕಾಲೇಜು ಡೀನ್ ಪ್ರೊ.ಆರ್.ವಿ.ಪ್ರಭಾಕರ, ಪ್ರಾಂಶುಪಾಲ ಪ್ರೊ.ಡಿ.ಆರ್.ಸುಧಾ ಉಪಸ್ಥಿತರಿದ್ದರು.







