ಪಿಎನ್‌ಬಿ ಹಗರಣದ ಮೊದಲ ದೋಷಾರೋಪಣ ಪಟ್ಟಿಯಲ್ಲಿ ನೀರವ್ ಮೋದಿ ‘ಅಪೇಕ್ಷಿತ ಆರೋಪಿ’

ಮುಂಬೈ,ಮೇ 14: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ)ಗೆ 13,400 ಕೋ.ರೂ.ವಂಚನೆ ಪ್ರಕರಣದಲ್ಲಿ ತನ್ನ ಮೊದಲ ದೋಷಾರೋಪಣ ಪಟ್ಟಿಯನ್ನು ಸಿಬಿಐ ಮುಂಬೈನ ನ್ಯಾಯಾಲಯದಲ್ಲಿ ಸೋಮವಾರ ಸಲ್ಲಿಸಿದ್ದು,ವಜ್ರಾಭರಣಗಳ ವ್ಯಾಪಾರಿ ನೀರವ್ ಮೋದಿಯನ್ನು ‘ಅಪೇಕ್ಷಿತ ಆರೋಪಿ’ ಎಂದು ಹೆಸರಿಸಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಮೋದಿಯ ಸೋದರಮಾವ ಹಾಗೂ ವಜ್ರಾಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ಮತ್ತು ಹಿರಿಯ ಬ್ಯಾಂಕ್ ಅಧಿಕಾರಿಗಳೂ ಭಾಗಿಯಾಗಿದ್ದಾರೆ. ಬಂಧಿತ 19 ಜನರ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನಿಗದಿತ 90 ದಿನಗಳ ಅವಧಿಯ ಅಂತ್ಯದಲ್ಲಿ ಸಲ್ಲಿಸಲಾಗಿದ್ದು,ಆರೋಪಿಗಳಿಗೆ ಈಗ ಜಾಮೀನು ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ.
ಹಿಂದೆ ಪಿಎನ್‌ಬಿಯ ಎಂಡಿ ಮತ್ತು ಸಿಇಒ ಆಗಿದ್ದು ಈಗ ಅಲಹಾಬಾದ್ ಬ್ಯಾಂಕಿನಲ್ಲಿ ಅದೇ ಹುದ್ದೆಯಲ್ಲಿರುವ ಉಷಾ ಅನಂತಸುಬ್ರಮಣಿಯನ್, ಪಿಎನ್‌ಬಿಯ ಕಾರ್ಯಕಾರಿ ನಿರ್ದೇಶಕರಾದ ಕೆ.ವಿ.ಬ್ರಹ್ಮಾಜಿ ರಾವ್ ಮತ್ತು ಸಂಜೀವ ಶರಣ್ ಹಾಗೂ ಪ್ರಧಾನ ವ್ಯವಸ್ಥಾಪಕ(ಆಂತರಿಕ ಕಾರ್ಯಾಚರಣೆಗಳು) ನೇಹಲ್ ಅಹದ್ ಅವರನ್ನೂ ಆರೋಪಿಗಳೆಂದು ಸಿಬಿಐ ಹೆಸರಿಸಿದೆ. ಚೋಕ್ಸಿ ವಿರುದ್ಧ ಪ್ರತ್ಯೇಕ ದೋಷಾರೋಪಣ ಪಟ್ಟಿಯನ್ನು ಅದು ನಂತರ ಸಲ್ಲಿಸಲಿದೆ. ಲೆಟರ್ ಆಫ್ ಅಂಡರ್‌ಟೇಕಿಂಗ್(ಎಲ್‌ಒಯು) ಅಥವಾ ಖಾತರಿ ಪತ್ರಗಳ ನಗದೀಕರಣ ವೇದಿಕೆಯಾಗಿರುವ ಸ್ವಿಫ್ಟ್ ನಿಯಂತ್ರಣ ವ್ಯವಸ್ಥೆಗೆ ಸಂಬಂಧಿಸಿದಂತೆ ಆರ್‌ಬಿಐ ಹೊರಡಿಸಿದ್ದ ಸುತ್ತೋಲೆಗಳನ್ನು ಹಿರಿಯ ಪಿಎನ್‌ಬಿ ಅಧಿಕಾರಿಗಳು ಪಾಲಿಸಿರಲಿಲ್ಲ ಎಂದು ಸಿಬಿಐ ಆರೋಪಿಸಿದೆ.
ಮೋದಿಯ ಪತ್ನಿ ಆ್ಯಮಿ ಮೋದಿ,ಸಹೋದರ ನಿಶಾಲ್ ಮೋದಿ ಮತ್ತು ಇತರ ಕುಟುಂಬ ಸದಸ್ಯರನ್ನು ಈ ವಾರದ ಉತ್ತರಾರ್ಧದಲ್ಲಿ ಸಲ್ಲಿಸಲಾಗುವ ಪೂರಕ ದೋಷಾರೋಪಣ ಪಟ್ಟಿಯಲ್ಲಿ ಹೆಸರಿಸುವ ಸಾಧ್ಯತೆಗಳಿವೆ ಎಂದು ಸಿಬಿಐ ಮೂಲಗಳು ತಿಳಿಸಿದವು.
ತಮ್ಮ ವಂಚನೆಯು ಬಹಿರಂಗಗೊಳ್ಳುವ ಮೊದಲೇ ದೇಶವನ್ನು ತೊರೆದು ಪರಾರಿಯಾಗಿರುವ ಮೋದಿ ಮತ್ತು ಚೋಕ್ಸಿ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಅವರು ಸ್ವದೇಶಕ್ಕೆ ಮರಳಲು ನಿರಾಕರಿಸಿರುವುದರಿಂದ ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ಗಳನ್ನು ಹೊರಡಿಸಲಾಗಿದೆ.







