ಒಡಿಶಾದಲ್ಲಿ ಮಾವೋವಾದಿಯ ಹತ್ಯೆ : ನಕ್ಸಲರ ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ
ಫುಲ್ಬನಿ, ಮೇ 14: ಒಡಿಶಾದ ಕಂಧಮಾಲ್ ಜಿಲ್ಲೆಯ ಸುಡುಕುಂಪಾ ಮೀಸಲು ಅರಣ್ಯದಲ್ಲಿ ಸೋಮವಾರ ಭದ್ರತಾ ಪಡೆಗಳೊಂದಿಗಿನ ಗುಂಡಿನ ಕಾಳಗದಲ್ಲಿ ಓರ್ವ ಮಾವೋವಾದಿ ಕೊಲ್ಲಲ್ಪಟ್ಟಿದ್ದಾನೆ. ಇದರೊಂದಿಗೆ ರವಿವಾರದಿಂದ ರಾಜ್ಯದಲ್ಲಿ ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಕೊಲ್ಲಲ್ಪಟ್ಟ ಮಾವೋವಾದಿಗಳ ಸಂಖ್ಯೆ ಏಳಕ್ಕೇರಿದೆ.
ರವಿವಾರ ಬೆಳಗಿನ ಜಾವ ಬಾಲಂಗಿರ್ ಜಿಲ್ಲೆಯ ದೂದ್ಕಮಲ್ ಗ್ರಾಮದಲ್ಲಿ ಇಬ್ಬರು ಮಾವೋವಾದಿಗಳು ಭದ್ರತಾ ಪಡೆಗಳ ಗುಂಡುಗಳಿಗೆ ಬಲಿಯಾಗಿದ್ದರೆ,ಸಂಜೆ ಕಂಧಮಾಲ್ ಜಿಲ್ಲೆಯ ಗೋಲಂಕಿ ಗ್ರಾಮದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಮಾವೋವಾದಿಗಳು ಕೊಲ್ಲಲ್ಪಟ್ಟಿದ್ದರು.
ಕಂಧಮಾಲ್ ಜಿಲ್ಲೆಯಲ್ಲಿ ರವಿವಾರ ಕೊಲ್ಲಲ್ಪಟ್ಟ ನಾಲ್ವರು ಮಾವೋವಾದಿಗಳ ಪೈಕಿ ಓರ್ವನನ್ನು ಶಂಕರ ಮಝಿ(37) ಎಂದು ಗುರುತಿಸಲಾಗಿದ್ದು,ಆತ ತನ್ನ ತಲೆಯ ಮೇಲೆ ಐದು ಲ.ರೂ.ಗಳ ಬಹುಮಾನವನ್ನು ಹೊತ್ತಿದ್ದ ಎಂದು ಎಸ್ಪಿ ಪ್ರತೀಕ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದರು.
ರವಿವಾರದಿಂದ ಘಟನಾ ಸ್ಥಳಗಳಿಂದ ಒಂದು ಎಕೆ-47 ಸೇರಿದಂತೆ ಒಟ್ಟು 11 ರೈಫಲ್ಗಳು,ಮದ್ದುಗುಂಡುಗಳು ಮತ್ತು ಮಾವೋ ಸಾಹಿತ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.





