ಉಡುಪಿ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ: ಆರೋಪಿಗಳಿಗೆ ಶಿಕ್ಷೆ

ಉಡುಪಿ, ಮೇ 14: ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣದ ಮೂವರು ಆರೋಪಿಗಳಿಗೆ ಉಡುಪಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯವು ಜೈಲುಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಕೊಡವೂರು ಗ್ರಾಮದ ಕಲ್ಮಾಡಿಯ ನಿವಾಸಿಗಳಾದ ಬೋಜ ಕಾಂಚನ್, ರವಿ ಕುಂದರ್, ನಾಗೇಶ ಕುಂದರ್ ಶಿಕ್ಷೆಗೆ ಗುರಿಯಾದ ಆರೋಪಿಗಳು. 2014ರ ಮೇ 31ರಂದು ರಾತ್ರಿ 11-25ರ ಸುಮಾರಿಗೆ ಆಗಿನ ಸಂಚಾರ ಪಿಎಸ್ಸೈ ಮಹಾದೇವಪ್ಪ ದಿಡ್ಡಿಮನೆ ಇತರ ಸಿಬ್ಬಂದಿಗಳೊಂದಿಗೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಮಾಡಿ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಮೂವರು ಆರೋಪಿಗಳು ಅಮಲು ಪದಾರ್ಥ ಸೇವಿಸಿ ಮೂರು ಬೈಕಿನಲ್ಲಿ ಜೋರಾಗಿ ಮಾತನಾಡಿಕೊಂಡು ಬರುತ್ತಿದ್ದರು. ಇವರ ಬೈಕ್ ಗಳನ್ನು ಪೊಲೀಸರು ನಿಲ್ಲಿಸಿದಾಗ ‘ನೀವು ಎಷ್ಟು ಹೊತ್ತಿಗೆ ಅಂತ ಪರಿಶೀಲನೆ ಮಾಡುವುದು’ ಎಂದು ಪಿಎಸ್ಸೈ ಅವರನ್ನು ದೂಡಿ, ಹಲ್ಲೆ ಮಾಡಲು ಪ್ರಯತ್ನಿಸಿದರು.
ಈ ಸಂದರ್ಭ ಗಸ್ತು ಕರ್ತವ್ಯದಲ್ಲಿದ್ದ ಆಗಿನ ಉಡುಪಿ ಉಪವಿಭಾಗದ ಪ್ರಭಾರ ಸಹಾಯಕ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಸ್ಥಳಕ್ಕೆ ಬಂದಿದ್ದು, ಆರೋಪಿಗಳು ಅವರನ್ನು ಕೂಡ ಲೆಕ್ಕಿಸದೆ ಪಿಎಸ್ಸೈ ಕೈಯಲ್ಲಿದ್ದ ಅಲ್ಕೋಹಾಲ್ ಚೆಕ್ ಮಾಡುವ ಮೆಷಿನನ್ನು ಎಳೆದಾಡಿ ಜಖಂಗೊಳಿಸಲು ಪ್ರಯತ್ನಿಸಿ ಸರಕಾರಿ ಅಧಿಕಾರಿ ಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದರು. ಈ ಬಗ್ಗೆ ಅಣ್ಣಾಮಲೈ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಉಡುಪಿ ವೃತ್ತ ನಿರೀಕ್ಷಕ ಶ್ರೀಕಾಂತ್ ಕೆ. ಪ್ರಕರಣದ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆಯು ಉಡುಪಿ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆದಿದ್ದು, ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯ ಮತ್ತು ವಾದ ಪ್ರತಿವಾದ ವನ್ನು ಆಲಿಸಿದ ನ್ಯಾಯಾಧೀಶ ಮಂಜುನಾಥ್ ಎಂ.ಎಸ್. ಆರೋಪಿ ಗಳ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ಭಾರತೀಯ ದಂಡ ಸಂಹಿತೆ ಕಲಂಸ 353 ಜೊತೆಗೆ 34 ರಡಿ ತಲಾ 6 ತಿಂಗಳು ಸಾದಾ ಸಜೆ ಮತ್ತು 1,000 ರೂ. ದಂಡ ವಿಧಿಸಿ ಮೇ 11ರಂದು ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮಮ್ತಾಝ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.







