ಮೇ 21-ಜೂ.11: ಪ್ಯಾರೀಸ್‌ನಲ್ಲಿ ಯಕ್ಷಗಾನ ಪ್ರದರ್ಶನ

ಉಡುಪಿ, ಮೇ 14: ಪ್ಯಾರೀಸ್‌ನಲ್ಲಿ ಮೇ 21ರಿಂದ ಜೂ.11ರವರೆಗೆ ನಡೆಯುವ ಕೆರಫೋರ್ ಇಂಟರ್‌ನ್ಯಾಶನಲ್ ಥಿಯೇಟರ್ ಫೆಸ್ಟಿವಲ್‌ನಲ್ಲಿ ಉಡುಪಿ ಯಕ್ಷಗಾನ ಕೇಂದ್ರದ ಗುರು ಬನ್ನಂಜೆ ಸಂಜೀವ ಸುವರ್ಣ ನೇತೃತ್ವದ ಮೂವರ ತಂಡ ಯಕ್ಷಗಾನ ಪ್ರದರ್ಶನ ನೀಡಲಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬನ್ನಂಜೆ ಸಂಜೀವ ಸುವರ್ಣ, ನಾನು, ಯಕ್ಷಗಾನ ಕೇಂದ್ರದ ಶಿಕ್ಷಕ ಶೈಲೇಶ್ ನಾಯ್ಕ ತೀರ್ಥ ಹಳ್ಳಿ, ವೇದಾ ಎಸ್.ಸುವರ್ಣರ ತಂಡ ಮೇ 18ರಂದು ಪ್ಯಾರೀಸ್‌ಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿ ನಡೆಯುವ ಫೆಸ್ಟಿವಲ್‌ನಲ್ಲಿ ಶೂರ್ಪನಕ ಮಾನಭಂಗ, ಜಾಂಭವತಿ ಕಲ್ಯಾಣ, ಸೀತಾಪಹರಣ, ಅಭಿಮನ್ಯು ಕಾಳಗ ಎಂಬ 45ನಿಮಿಷಗಳ ಯಕ್ಷಗಾನ ಪ್ರದಶರ್ನವನ್ನು ನೀಡಲಾಗುವುದು ಎಂದರು.
ಯಕ್ಷಗಾನ ಕೇಂದ್ರದಲ್ಲಿ ಯಕ್ಷಗಾನ ಕಲಿತ ಕೇರಳ ಮೂಲದ ಪ್ರಸ್ತುತ ಪ್ಯಾರೀಸ್ ಪ್ರಜೆ ಅನಿತಾ ಹೆರ್ ನಮ್ಮನ್ನು ಪ್ಯಾರೀಸ್‌ಗೆ ಕರೆಸಿಕೊಳ್ಳುತ್ತಿದ್ದಾರೆ. ಫೆಸ್ಟಿವಲ್‌ನಲ್ಲಿ ಪ್ರತಿದಿನ ಕಾರ್ಯಾಗಾರಗಳು ನಡೆಯಲಿದ್ದು ಮುಖ್ಯವಾಗಿ ಯಕ್ಷಗಾನದಿಂದ ರಂಗಭೂಮಿಗೆ ಏನು ಪ್ರಯೋಜನ ಎಂಬ ವಿಷಯದಲ್ಲೂ ಕಾರ್ಯಾಗಾರ ಜರಗಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಯಕ್ಷಗಾನ ಕೇಂದ್ರದ ಶಿಕ್ಷಕ ಶೈಲೇಶ್ ನಾಯ್ಕ ತೀರ್ಥಹಳ್ಳಿ, ವೇದಾ ಎಸ್.ಸುವರ್ಣ ಉಪಸ್ಥಿತರಿದ್ದರು.





