ಮೇ 18ರಂದು ‘ಪೆಟ್‌ಕಮ್ಮಿ’ ತುಳುಚಿತ್ರ ಬಿಡುಗಡೆ
ಉಡುಪಿ, ಮೇ 14: ಮಾಲ್ಗುಡಿ ಡೇಸ್ ಅರ್ಪಿಸುವ ಥ್ರಿಲ್ಲರ್, ಸಸ್ಪೆನ್ಸ್ ಹಾಗೂ ಕಾಮೆಡಿ ತುಳು ಚಿತ್ರ ‘ಪೆಟ್‌ಕಮ್ಮಿ’ ಮೇ 18ರಂದು ಕರಾವಳಿ ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಸಿನೆಮಾದ ನಿರ್ಮಾಪಕ ಉಡುಪಿ ಮೂಲದ ಮುಂಬೈಯ ಅಶೋಕ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎಪ್ರಿಲ್ ತಿಂಗಳಲ್ಲಿ ಸಿನೆಮಾದ ಶೂಟಿಂಗ್ ಆರಂಭವಾಗಿದ್ದು, ಈಗಾಗಲೇ ಎಲ್ಲ ತಯಾರಿಗಳು ಮುಗಿದಿವೆ. ಮಂಗಳೂರು, ಉಡುಪಿ, ಮಣಿಪಾಲ, ಮೂಡು ಬಿದಿರೆ ಸೇರಿದಂತೆ ಕರಾವಳಿಯಾದ್ಯಂತ ಒಟ್ಟು 13 ಸಿಂಗಲ್ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದರು.
50ಲಕ್ಷ ರೂ. ಬಜೆಟ್‌ನ ಚಿತ್ರದ ಟೈಟಲ್ನ್ನು ತುಳು ಲಿಪಿಯಲ್ಲಿ ಬರೆಯ ಲಾಗಿದೆ. ತುಳುನಾಡಿನ ಸಂಸ್ಕೃತಿ, ಸಂಪ್ರದಾಯ, ಕಲೆಯನ್ನು ಪ್ರತಿಬಿಂಬಿಸುವ ಚಿತ್ರದ ಹಾಡು ಈಗಾಗಲೇ ಪ್ರಸಿದ್ಧಿ ಪಡೆದಿದೆ. ಹೆಬ್ರಿ, ಕಾರ್ಕಳ, ಮಲ್ಪೆ, ಉಡುಪಿ, ಮಂಗಳೂರುಗಳಲ್ಲಿ ಚಿತ್ರೀಕರಣ ನಡೆದಿದ್ದು, ಸಿನೆಮಾದಲ್ಲಿ ಎರಡು ಹಾಡುಗಳಿವೆ. ಮಂಗಳೂರು ಸಮೀಪದ ಬೋಳ್ಯಾರ್‌ನಲ್ಲಿ ನಡೆದ ಸತ್ಯ ಘಟನೆಯನ್ನು ಆಧಾರಿಸಿ ಈ ಚಿತ್ರ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಕೀರ್ತಿ, ನಾಯಕ ನಟ ಶ್ರೀರಾಮ್, ನಟಿಯ ರಾದ ಅನ್ವಿತಾ ಸಾಗರ್, ರೇಖಾ, ಹಾಸ್ಯ ನಟ ರಾಧೇಶ್ ಶೆಣೈ ಇದ್ದರು.







