ಉಡುಪಿ: ಐದು ಕ್ಷೇತ್ರಗ ಮತ ಎಣಿಕೆಗೆ ಕ್ಷಣಗಣನೆ ಆರಂಭ

ಉಡುಪಿ, ಮೇ 14:ದೇಶಾದ್ಯಂತ ವಿಶೇಷ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಮತಗಳ ಎಣಿಕೆಗೆ ಕ್ಷಣಗಣನೆ ಪ್ರಾರಂಭ ಗೊಂಡಿದ್ದು, ಉಡುಪಿಯ ಕುಂಜಿಬೆಟ್ಟಿನಲ್ಲಿರುವ ಟಿ.ಎ.ಪೈ ಆಂಗ್ಲ ಮಾದ್ಯಮ ಪ್ರೌಢ ಶಾಲೆಯಲ್ಲಿ ಮತ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗೆ ಎಲ್ಲಾ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆಗಳನ್ನು ನೀಡಿದ ಅವರು ಜಿಲ್ಲೆಯಲ್ಲಿ ಶೇ.78.87 ಮತದಾನವಾಗಿದ್ದು, ಒಟ್ಟು 9,93,415 ಮತದಾರರಲ್ಲಿ 7,83,315 ಮಂದಿ ಮತದಾನ ಮಾಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಒಟ್ಟು 8176 ವಿಕಲಚೇತನ ಮತದಾರರಲ್ಲಿ 2851 ಮಂದಿ ಮತ ಚಲಾಯಿಸಿದ್ದಾರೆ. 24 ಮಂದಿ ಲೈಂಗಿಕ ಅಲ್ಪಸಂಖ್ಯಾತ ಮತದಾರರ ಪೈಕಿ ಇಬ್ಬರು ಮಾತ್ರ ಮತ ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಸ್ಥಾಪಿಸಲಾದ 10 ಪಿಂಕ್ ಮತಗಟ್ಟೆ ಬೂತ್‌ಗಳಲ್ಲಿ 3871 ಮಹಿಳೆಯರು ಹಾಗೂ 3461 ಪುರುಷ ಮತದಾರರ ಮತ ಚಲಾಯಿಸಿದ್ದಾರೆ.
ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಸ್ಮಾರಕ ಶಾಲೆಯಲ್ಲಿ ತೆರೆಯಲಾದ ಜಿಲ್ಲೆಯ ಏಕೈಕ ದಿವ್ಯಾಂಗರ ಮತಗಟ್ಟೆಯಲ್ಲಿ ಶೇ.87.26ರಷ್ಟು ಮತದಾನ ವಾಗಿದೆ. 2013ರಲ್ಲಿ ಇಲ್ಲಿ 86.51ಶೇ. ಮತದಾನವಾಗಿತ್ತು. ಅದೇ ರೀತಿ ಬುಡಕಟ್ಟು ಪ್ರದೇಶದಲ್ಲಿ ಮೂರು ಮತಗಟ್ಟೆಗಳನ್ನು ತೆರೆದಿದ್ದು, ಈ ಮತಗಟ್ಟೆಗಳಲ್ಲಿ ಒಟ್ಟು 1016 ಪುರುಷರು ಹಾಗೂ 1029 ಮಹಿಳೆಯರು ಮತದಾನ ಮಾಡಿದ್ದಾರೆ ಎಂದರು.
ಮತ ಎಣಿಕೆ ಕೇಂದ್ರ: ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳ ಮತಗಳ ಎಣಿಕೆ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಮತಗಳ ಎಣಿಕೆ ಬೆಳಗ್ಗೆ 8:00ಗಂಟೆಗೆ ಪ್ರಾರಂಭಗೊಳ್ಳಲಿದೆ. ಮೊದಲು ಅಂಚೆ ಮತಚೀಟಿಗಳ ಎಣಿಕೆ ನಡೆಯಲಿದೆ. ಇದು ಮುಗಿದ ಬಳಿಕ ಮತಯಂತ್ರಗಳ ಮತ ಎಣಿಕೆ ಪ್ರಾರಂಭಗೊಳ್ಳಲಿದೆ ಎಂದರು.
ಮತ ಎಣಿಕೆಗೆ ನಿಯೋಜನೆಗೊಂಡ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಳು ಬೆಳಗ್ಗೆ 6:00ಗಂಟೆಗೆ ಮತ ಎಣಿಕಾ ಕೇಂದ್ರದಲ್ಲಿ ಹಾಜರಿರಬೇಕು. ಅಲ್ಲಿ ಅವರಿಗೆ ಚುನಾವಣಾ ವೀಕ್ಷಕರ ಸಮ್ಮುಖದಲ್ಲಿ ಮತ ಎಣಿಕಾ ಮೇಜುಗಳ ಹಂಚಿಕೆ ಮಾಡಲಾಗುವುದು. ಬೆಳಗ್ಗೆ 7:30ರೊಳಗೆ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅವರಿಗೆ ನಿಯೋಜಿಸಲಾದ ಮೇಜುಗಳ ಬಳಿ ಹಾಜರಿರ ಬೇಕು ಎಂದರು.
ಮತ ಎಣಿಕೆಯು ವಿಧಾನಸಭಾ ಕ್ಷೇತ್ರವಾರು ನಡೆಯಲಿದ್ದು, ಒಂದೊಂದು ಕೊಠಡಿಯಲ್ಲಿ ಒಂದೊಂದು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. 118.ಬೈಂದೂರು ಕ್ಷೇತ್ರ ಕೊಠಡಿ ನಂ.23ರಲ್ಲಿ, 119.ಕುಂದಾಪುರ ಕ್ಷೇತ್ರ ಕೊಠಡಿ ನಂ.14ರಲ್ಲಿ, 120.ಉಡುಪಿ ಕ್ಷೇತ್ರ ಕೊಠಡಿ ನಂ.13ರಲ್ಲಿ, 121.ಕಾಪು ಕ್ಷೇತ್ರ ಕೊಠಡಿ ನಂ.11ರಲ್ಲಿ ಹಾಗೂ 122.ಕಾರ್ಕಳ ಕ್ಷೇತ್ರದ ಮತಗಳ ಎಣಿಕೆ ಕೊಠಡಿ ನಂ.24ರಲ್ಲಿ ನಡೆಯಲಿದೆ ಎಂದು ಪ್ರಿಯಾಂಕ ಮೇರಿ ಫ್ರಾನ್ಸಿಸ್ ವಿವರಿಸಿದರು.
ಪ್ರತಿಯೊಂದು ಕೊಠಡಿಯಲ್ಲಿ ಮತ ಎಣಿಕೆಗೆ ತಲಾ 14 ಮೇಜುಗಳು ಹಾಗೂ ಚುನಾವಣಾಧಿಕಾರಿಗಳಿಗೆ ಒಂದು ಮೇಜನ್ನು ವ್ಯವಸ್ಥೆ ಮಾಡಲಾಗಿದೆ. ಚುನಾವಣಾಧಿಕಾರಿಗಳ ಮೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ಅಂಚೆ ಮತಪತ್ರಗಳ ಎಣಿಕೆ ಪ್ರಾರಂಭಗೊಳ್ಳಲಿದೆ. ಅಲ್ಲದೇ 155 ಸರ್ವಿಸ್ ಮತದಾರರ ಮತಗಳ ಎಣಿಕೆಯೂ ನಡೆಯಲಿದೆ.
ಮತ ಎಣಿಕೆ ಸುತ್ತುಗಳು: ಬೈಂದೂರು-18, ಕುಂದಾಪುರ-16, ಉಡುಪಿ-16, ಕಾಪು-15 ಹಾಗೂ ಕಾರ್ಕಳ-15 ಸುತ್ತುಗಳಲ್ಲಿ ಮತಗಳ ಎಣಿಕೆ ನಡೆಯಲಿದೆ. ಮತ ಎಣಿಕೆ ಪ್ರಕ್ರಿಯೆಗಾಗಿ ಒಟ್ಟು 90 ಎಣಿಕೆ ಮೇಲ್ವಿಚಾರಕರು, 90 ಎಣಿಕೆ ಸಹಾಯಕರು, 90 ಮೈಕ್ರೋ ಅಬ್ಸರ್ವರ್‌ಗಳು ಹಾಗೂ ಫಲಿತಾಂಶದ ವಿವರ ಕ್ರೋಡೀಕರಿಸುವ ಪ್ರಕ್ರಿಯೆ ಸೇರಿದಂತೆ ಉಳಿದ ಕೆಲಸಗಳಿಗೆ ಒಟ್ಟು 300 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಾಳೆ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ನಿಗದಿ ಪಡಿಸಿದ ಸಿಬ್ಬಂದಿಗಳು ಹಾಗೂ ಅಧಿಕಾರಿಗಳನ್ನು ಹೊರತು ಪಡಿಸಿ ಪತ್ರಕರ್ತರು ಸೇರಿದಂತೆ ಉಳಿದ ಯಾರಿಗೂ ಮತ ಎಣಿಕೆ ಕೊಠಡಿಗೆ ಪ್ರವೇಶ ಇರುವುದಿಲ್ಲ. ಪ್ರತಿ ಸುತ್ತಿನ ಕೊನೆಗೆ ಅಭ್ಯರ್ಥಿಗಳು ಗಳಿಸಿದ ಮತಗಳ ವಿವರಗಳನ್ನು ಸಾರ್ವಜನಿಕ ಧ್ವನಿವರ್ಧಕದ ಮೂಲಕ ಪ್ರಕಟಿಸಲಾಗುತ್ತದೆ. ಅಂತಿಮ ಸುತ್ತಿನ ವಿವರ ಪ್ರಕಟಣೆ ಬಳಿಕ ಚುನಾವಣಾಧಿಕಾರಿಗಳು ಅಂತಿಮವಾಗಿ ವಿಜೇತ ಅಭ್ಯರ್ಥಿಯ ಹೆಸರನ್ನು ಅಧಿಕೃತವಾಗಿ ಪ್ರಕಟಿಸುವರು ಎಂದವರು ವಿವರಿಸಿದರು.
ಪ್ರತಿ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಮುಗಿದ ಬಳಿಕ, ಪ್ರತಿ ಕ್ಷೇತ್ರದ ಒಂದು ಮತಗಟ್ಟೆಯ ವಿವಿಪ್ಯಾಟ್ ಸ್ಲಿಪ್‌ಗಳನ್ನು ಎಣಿಕೆ ಮಾಡಲಾಗುವುದು. ಈ ಮತಗಟ್ಟೆಯನ್ನು ಚುನಾವಣಾಧಿಕಾರಿಯೇ ಚೀಟಿ ಎತ್ತಿ ನಿರ್ಧರಿಸಲಿದ್ದಾರೆ. ಇಲ್ಲಿ ಮತ ಸ್ಲಿಪ್‌ನ ಲೆಕ್ಕ ಸರಿದೂಗಿದ ಬಳಿಕವಷ್ಟೇ ಚುನಾವಣಾಧಿಕಾರಿಗಳು ಆಯ್ಕೆಯಾದ ಅಭ್ಯರ್ಥಿ ಹೆಸರನ್ನು ಅಧಿಕೃತವಾಗಿ ಪ್ರಕಟಿಸುವರು ಎಂದರು.
ವಿಜಯೋತ್ಸವಕ್ಕೆ ನಿರ್ಬಂಧ: ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವಿಜೇತ ಅಭ್ಯರ್ಥಿಗಳು ವಿಜಯೋತ್ಸವದ ಸಮಯ ಪಟಾಕಿ ಸಿಡಿಸದಂತೆ ನಿರ್ಬಂಧ ವಿಧಿಸಲಾಗಿದೆ. ಇದು ನಾಳೆ ಬೆಳಗ್ಗೆ 10ರಿಂದ ಮೇ 17ರ ಸಂಜೆ 5:00ಗಂಟೆಯವರೆಗೆ ಉಡುಪಿ ಜಿಲ್ಲೆಯಾದ್ಯಂತ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಯಾವುದೇ ರೀತಿಯ ಪಟಾಕಿ/ಸಿಡಿಮದ್ದುಗಳ ಮಾರಾಟ ಹಾಗೂ ಅವುಗಳನ್ನು ಸಿಡಿಸುವುದನ್ನು ನಿಷೇಧಿಸಲಾಗಿದೆ ಎಂದರು. ಅಲ್ಲದೇ ಎಲ್ಲಾ ಪಟಾಕಿ ಮಾರಾಟ ಅಂಗಡಿ, ಮಳಿಗೆಗಳನ್ನು ಮುಚ್ಚುವಂತೆಯೂ ಸೂಚಿಸಲಾಗಿದೆ.
ಅಲ್ಲದೇ ಮೇ 14ರ ಮಧ್ಯರಾತ್ರಿ 12:00ರಿಂದ 15ರ ಮಧ್ಯರಾತ್ರಿ 12:00 ರವರೆಗೆ ಮದ್ಯ ನಿಷೇಧ ದಿನವಾಗಿ ಷೋಷಿಸಲಾಗಿದೆ ಹಾಗೂ ಮೇ 15 ಬೆಳಗ್ಗೆ 6ರಿಂದ 17ರ ಬೆಳಗ್ಗೆ 6ಗಂಟೆಯವರೆಗೆ ಜಿಲ್ಲೆಯಾದ್ಯಂತ 144ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ವಿಜಯೋತ್ಸವ ಮೆರವಣಿಗೆಯನ್ನು ನಡೆಸಲು ಅವಕಾಶವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು.
ಮತ ಎಣಿಕೆ ಅಪ್‌ಡೇಟ್
ಉಡುಪಿ ಜಿಲ್ಲೆಯೂ ಸೇರಿದಂತೆ ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಕ್ಷಣ ಕ್ಷಣದ ಸುದ್ದಿಗಾಗಿ -www.eciresults.nic.in - ವೆಬ್‌ಸೈಟ್‌ನ್ನು ವೀಕ್ಷಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.







