ದೂಳಿನ ಬಿರುಗಾಳಿ: ದಿಲ್ಲಿ-ಎನ್‌ಸಿಆರ್, ಯು.ಪಿ., ಪ.ಬಂಗಾಳ, ಆಂಧ್ರಪ್ರದೇಶದಲ್ಲಿ 50 ಮಂದಿ ಸಾವು

ಹೊಸದಿಲ್ಲಿ, ಮೇ 16: ದೇಶಾದ್ಯಂತ ರವಿವಾರ ಭಾರೀ ಮಳೆ, ಮಿಂಚಿನೊಂದಿಗೆ ಬೀಸಿದ ಬಿರುಗಾಳಿಗೆ 50ಕ್ಕಿಂತಲೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ. ರಾಷ್ಟ್ರ ರಾಜಧಾನಿ, ಉತ್ತರಪ್ರದೇಶ, ಪಶ್ಚಿಮಬಂಗಾಳ ಹಾಗೂ ಆಂಧ್ರಪ್ರದೇಶದಲ್ಲಿ ಸಾವು ಸಂಭವಿಸಿದೆ. ದಿಲ್ಲಿಯಲ್ಲಿ ಧೂಳಿನಿಂದ ಕೂಡಿದ ಭಾರೀ ಬಿರುಗಾಳಿ ಹಾಗೂ ಮಳೆಗೆ ಇಬ್ಬರು ಮೃತಪಟ್ಟಿದ್ದಾರೆ. ವಿಮಾನ ಸೇವೆ ಹಾಗೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಕಸ್ಗಂಜ್, ಬಲಂದಶಹರ್, ಶಹರಾನ್‌ಪುರ, ಗಾಝಿಯಾಬಾದ್, ಕನೌಜ್, ಅಲಿಗಢ, ಹಾಪುರ್, ಗೌತಮಬುದ್ಧ ನಗರ ಹಾಗೂ ಸಂಭಾಲ್‌ನಲ್ಲಿ ಸಾವು ಸಂಭಿವಿಸಿದೆ ಎಂದು ಸರಕಾರದ ಪತ್ರಿಕಾ ಹೇಳಿಕೆ ತಿಳಿಸಿದೆ. ಮೇ 13 ಹಾಗೂ 14ರಂದು ಉತ್ತರಪ್ರದೇಶದ ವಿವಿಧ ಭಾಗಗಳಲ್ಲಿ ಬೀಸಿದ ಧೂಳಿನ ಬಿರುಗಾಳಿಗೆ 38 ಮಂದಿ ಮೃತಪಟ್ಟಿದ್ದಾರೆ ಹಾಗೂ 50 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿರುಗಾಳಿ ಸಂತ್ರಸ್ತ ಜನರಿಗೆ ಪರಿಹಾರ ಹಾಗೂ ಗಾಯಗೊಂಡವರಿಗೆ ಸಮರ್ಪ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಜಿಲ್ಲಾ ದಂಡಾಧಿಕಾರಿ ಹಾಗೂ ಆಯುಕ್ತರಿಗೆ ಸೂಚಿಸಿದ್ದಾರೆ ಎಂದು ಸರಕಾರದ ವಕ್ತಾರರು ಹೇಳಿದ್ದಾರೆ.
ಮರಗಳು ಉರುಳಿ ರಸ್ತೆ ತಡೆ ಉಂಟಾದ ಹಿನ್ನೆಲೆಯಲ್ಲಿ ನೌಜ್‌ಹೀಲ್‌ನತ್ತ ತೆರಳುತ್ತಿದ್ದ ಚಿತ್ರ ನಟಿ ಹೇಮಮಾಲಿನ ಕೆಲವು ಹೊತ್ತು ರಸ್ತೆ ಬದಿಯಲ್ಲೇ ನಿಲ್ಲಬೇಕಾಯಿತು. ಮರಗಳನ್ನು ತೆರವುಗೊಳಿಸಿದ ಬಳಿಕ ಅವರು ತೆರಳಿದರು. ಮೇ 2ರಂದು ಬೀಸಿದ ಬಿರುಗಾಳಿಯಿಂದ ಉತ್ತರ ಭಾರತದಲ್ಲಿ 134 ಜನರು ಮೃತಪಟ್ಟಿದ್ದರು ಹಾಗೂ ಹಲವರು ಗಾಯಗೊಂಡಿದ್ದರು.





