ಸುಪ್ರೀಂ ಕೋರ್ಟ್‌ಗೆ ಕಾವೇರಿ ನಿರ್ವಹಣಾ ಯೋಜನೆಯ ಕರಡು ಸಲ್ಲಿಸಿದ ಕೇಂದ್ರ

ಹೊಸದಿಲ್ಲಿ, ಮೇ 14: ಕಾವೇರಿ ನದಿ ನೀರನ್ನು ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪಾಂಡಿಚೇರಿ ನಡುವೆ ಹಂಚುವ ಸುಪ್ರೀಂ ಕೋರ್ಟ್‌ನ ಫೆಬ್ರವರಿ 16ರ ತೀರ್ಪಿನ್ನು ಅನುಷ್ಠಾನಗೊಳಿಸಲು ಕಾವೇರಿ ನಿರ್ವಹಣಾ ಯೋಜನೆಯ ಕರಡನ್ನು ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಕೇಂದ್ರ ಜಲ ಸಂಪನ್ಮೂಲ ಖಾತೆಯ ಕಾರ್ಯದರ್ಶಿ ಸಲ್ಲಿಸಿದ ಯೋಜನೆಯ ಕರಡನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎಂ.ಎಂ. ಖಾನ್ವಿಲ್ಕರ್ ಹಾಗೂ ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ದಾಖಲು ಮಾಡಿಕೊಂಡಿತು ಹಾಗೂ ಅದನ್ನು ಪರಿಶೀಲಿಸುವುದಾಗಿ ತಿಳಿಸಿತು. ‘‘ನಮ್ಮ ತೀರ್ಪಿನೊಂದಿಗೆ ಈ ಯೋಜನೆ ಹೋಲಿಕೆಯಾಗುತ್ತಿದೆಯೇ ಎಂದು ನಾವು ಪರಿಶೀಲಿಸುವ ಅಗತ್ಯತೆ ಇದೆ. ಈ ಯೋಜನೆಯನ್ನು ಪರಿಗಣಿಸಲಾಗುವುದು ಮೇ 16ರಂದು ಅನುಮೋದಿಸಲಾಗುವುದು’’ ಎಂದು ಪೀಠ ಹೇಳಿತು.
‘ಯೋಜನೆ ಸಮರ್ಪಕತೆ’ ಬಗ್ಗೆ ನಾವು ಪರಿಶೀಲಿಸುವುದಿಲ್ಲ. ಬದಲಾಗಿ ನಾವು ಫೆಬ್ರವರಿ 16ರಂದು ನೀಡಿದ ತೀರ್ಪಿನೊಂದಿಗೆ ಈ ಯೋಜನೆ ಹೋಲಿಕೆಯಾಗು ತ್ತಿದೆಯೇ ಎಂಬುದಕ್ಕೆ ಪರಿಶೀಲಿಸುತ್ತೇವೆ ಎಂದು ಪೀಠ ಹೇಳಿದೆ. ಕರಡು ಯೋಜನೆಯೊಂದಿಗೆ ಮೇ 14ರಂದು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಸುಪ್ರೀಂ ಕೋರ್ಟ್ ಮೇ 8ರಂದು ಕೇಂದ್ರ ಜಲ ಸಂಪನ್ಮೂಲ ಸಚಿವಾಲಯಕ್ಕೆ ನೋಟಿಸು ಜಾರಿ ಮಾಡಿತ್ತು. ಇದುವರೆಗೆ ನದಿ ನೀರು ಹಂಚಿಕೆಯ ಕುರಿತು ಯೋಜನೆ ರೂಪಿಸದೆ ಪೆಬ್ರವರಿ 16ರ ತೀರ್ಪಿನ ‘ಸಂಪೂರ್ಣ ಉಲ್ಲಂಘನೆ’ ಎಂದು ಕೇಂದ್ರಕ್ಕೆ ಎಚ್ಚರಿಸಿತ್ತು.







