ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಬೆಂಬಲದಿಂದ ‘ಗೆದ್ದ’ ಕಾಂಗ್ರೆಸ್ ಅಭ್ಯರ್ಥಿ!

ಮುಂಬೈ,ಮೇ 14: ಪಲುಸ್-ಕಡೇಗಾಂವ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮೇ 28ಕ್ಕೆ ನಿಗದಿಯಾಗಿದೆಯಾದರೂ ಕಾಂಗ್ರೆಸ್ ಅಭ್ಯರ್ಥಿ ವಿಶ್ವಜಿತ ಕದಂ ಅವರು ತನ್ನ ಪಕ್ಷದ ಬದ್ಧವೈರಿಗಳಾದ ಬಿಜೆಪಿ ಮತ್ತು ಶಿವಸೇನೆ ಬೆಂಬಲದೊಂದಿಗೆ ಅವಿರೋಧ ಆಯ್ಕೆಗೆ ಸಜ್ಜಾಗಿದ್ದು, ಮಹಾರಾಷ್ಟ್ರ ರಾಜಕಾರಣವು ಮೊದಲ ಬಾರಿಗೆ ಇಂತಹ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಸೋಮವಾರ ನಾಮಪತ್ರಗಳನ್ನು ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, ಕದಂ ಅವರೊಬ್ಬರೇ ಕಣದಲ್ಲಿ ಉಳಿದುಕೊಂಡಿದ್ದಾರೆ.
ಸೋಮವಾರ ಬಿಜೆಪಿ ಅಭ್ಯರ್ಥಿ ತನ್ನ ನಾಮಪತ್ರವನ್ನು ಹಿಂದೆಗೆದುಕೊಂಡಿದ್ದು, ಜೊತೆಗೆ ಏಳು ಪಕ್ಷೇತರ ಅಭ್ಯರ್ಥಿಗಳೂ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಇದಕ್ಕೂ ಮುನ್ನ ಶಿವಸೇನೆ ಮತ್ತು ಎನ್‌ಸಿಪಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರುವ ಮೂಲಕ ಕದಂ ಅವರನ್ನು ಬೆಂಬಲಿಸಿದ್ದವು. ಸಾಂಗ್ಲಿಯ ಚುನಾವಣಾಧಿಕಾರಿಗಳಿಂದ ವರದಿ ಕೈಸೇರಿದ ಬಳಿಕ ರಾಜ್ಯ ಚುನಾವಣಾ ಆಯೋಗವು ಕದಂ ಅವರ ಅವಿರೋಧ ಆಯ್ಕೆಯನ್ನು ಘೋಷಿಸುವ ಔಪಚಾರಿಕತೆಯಷ್ಟೇ ಈಗ ಬಾಕಿಯುಳಿದಿದೆ.
ಕದಂ ಅವರನ್ನು ಬೆಂಬಲಿಸುವಂತೆ ತಾವು ಬಿಜೆಪಿ ಮತ್ತು ಶಿವಸೇನೆಯನ್ನು ಕೋರಿಕೊಂಡಿದ್ದೆವು ಎನ್ನುವುದನ್ನು ಕಾಂಗ್ರೆಸ್ ನಾಯಕರು ನಿರಾಕರಿಸಿದ್ದಾರೆ. ವಿಶ್ವಜಿತ್ ತಂದೆ ಪತಂಗರಾವ್ ಕದಂ ಬಿಜೆಪಿ ಮತ್ತು ಶಿವಸೇನೆ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಹೀಗಾಗಿ ಕದಂ ತನ್ನ ಸ್ವಂತ ಸಾಮರ್ಥ್ಯದಿಂದ ಈ ಕಾರ್ಯವನ್ನು ಸಾಧಿಸಿರುವಂತಿದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಹಾಗು ಹಿರಿಯ ಕಾಂಗ್ರೆಸ್ ನಾಯಕ ಪತಂಗರಾವ್ ಕದಂ ಅವರ ನಿಧನದಿಂದಾಗಿ ಪಲುಸ್-ಕಡೇಗಾಂವ್ ಕ್ಷೇತ್ರ ತೆರವಾಗಿದೆ. ಅವರು ಸಾಂಗ್ಲಿ ಜಿಲ್ಲೆಯ ವಾಂಗಿ-ಬಿಲವಾಡಿ ವಿಧಾನಸಭಾ ಕ್ಷೇತ್ರದಿಂದ ಆರು ಬಾರಿ ಗೆದ್ದಿದ್ದು,ಎರಡು ಬಾರಿ ಸೋತಿದ್ದರು. 2014ರ ಚುನಾವಣೆಯಲ್ಲಿ ಈ ಕ್ಷೇತ್ರವನ್ನು ಪಲುಸ್-ಕಡೇಗಾಂವ್ ಎಂದು ಮರುನಾಮಕರಣಗೊಳಿಸಲಾಗಿತ್ತು.







