ಪಶ್ಚಿಮಬಂಗಾಳ : ಗ್ರಾ.ಪಂ. ಚುನಾವಣೆಯಲ್ಲಿ ವ್ಯಾಪಕ ಹಿಂಸಾಚಾರ
ಬಾಂಬ್, ಗುಂಡಿಗೆ 13 ಸಾವು; 50 ಮಂದಿಗೆ ಗಾಯ

ಕೋಲ್ಕತ್ತಾ, ಮೇ 14: ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಮತಗಟ್ಟೆ ವಶ ಹಾಗೂ ಘರ್ಷಣೆಯಿಂದ ಮತದಾನದ ಅನಿಶ್ಚಿತತೆಯ ಒಂದು ವಾರಗಳ ಬಳಿಕ ಸೋಮವಾರ ರಾಜ್ಯದಲ್ಲಿ ನಡೆದ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ಹಿಂಸಾಚಾರದಲ್ಲಿ 13 ಜನರು ಮೃತಪಟ್ಟಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಅಮ್ದಾಂಗದಲ್ಲಿ ಆಡಳಿತಾರೂಢ ಪಕ್ಷದ ಬೆಂಬಲಿಗರು ಕಚ್ಚಾ ಬಾಂಬ್ ಎಸೆದ ಪರಿಣಾಮ ಯುವಕ ತೈಬುರ್ ಗಯೇನ್ ಮೃತಪಟ್ಟಿದ್ದಾನೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ.
ಸಿಪಿಎಂ ಶಾಸಕ ತನ್ಮಯ್ ಭಟ್ಟಾಚಾರ್ಯ ಅವರು ಗಯೇನ್ ತಮ್ಮ ಪಕ್ಷದ ಬೆಂಬಲಿಗ ಎಂದು ಹೇಳಿದ್ದಾರೆ. ನಾಡಾ ಜಿಲ್ಲಿ ಸಾಂತಿಪುರದಲ್ಲಿ ಎದೆ ಹಾಗೂ ಹೊಟ್ಟೆಗೆ ಗುಂಡು ತಗುಲಿ 27ರ ಹರೆಯದ ಸಂಜಿತ್ ಪ್ರಮಾಣಿಕ್ ಮೃತಪಟ್ಟಿದ್ದಾರೆ. ಮುರ್ಶಿದಾಬಾದ್‌ನ ಬೆಲ್ದಂಗದಲ್ಲಿ ಬಾಂಬ್ ಸ್ಫೋಟಗೊಂಡು ಬಿಜೆಪಿ ಕಾರ್ಯಕರ್ತ ತಪನ್ ಮಂಡಲ್ ಮೃತಪಟ್ಟಿದ್ದಾನೆ. ಅವರು ಮತ ಚಲಾಯಿಸಲು ಮತಗಟ್ಟೆಗೆ ತೆರಳುತ್ತಿದ್ದರು.
ದಕ್ಷಿಣ 24 ಪರಗಣ ಜಿಲ್ಲೆಯ ನಮ್ಖಾನಾದಲ್ಲಿ ಬುಧಖಾಲಿ ಗ್ರಾಮ ಪಂಚಾಯತ್‌ನಲ್ಲಿ ದೇಬು ದಾಸ್ ಹಾಗೂ ಅವರ ಪತ್ನಿ ಉಮಾ ದಾಸ್ ಅವರನ್ನು ತೃಣಮೂಲ ಕಾಂಗ್ರೆಸ್‌ನ ಬೆಂಬಲಿಗರು ಬೆಂಕಿ ಹಚ್ಚಿ ಕೊಂದಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಮತಗಟ್ಟೆಯ ಮಂದೆ ಮತದಾರರು ಸರದಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಇವರಲ್ಲಿ ಹೆಚ್ಚಿ ನವರು ಮಹಿಳೆಯರು. ಇಲ್ಲಿ ಚುನಾವಣೆಯನ್ನು ಮತ ಪತ್ರದ ಮೂಲಕ ನಡೆಸಲಾಗಿದೆ.





