ಯುವ ವಿಜ್ಞಾನಿ ಪ್ರಶಸ್ತಿಗೆ ಅರ್ಜಿ ಆಹ್ವಾನ
ಉಡುಪಿ, ಮೇ 14: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ 2017-18ನೇ ಸಾಲಿನ ಯುವವಿಜ್ಞಾನಿ ಪ್ರಶಸ್ತಿಗಾಗಿ 9ರಿಂದ 12ನೇ ತರಗತಿಗಳಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಎಳೆಯ ವಯಸ್ಸಿನಲ್ಲೇ ವೈಜ್ಞಾನಿಕ ವಿಧಾನದ ಮನವರಿಕೆ ಮಾಡುವುದು, ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸುವುದು, ರಾಜ್ಯದ/ರಾಷ್ಟ್ರದ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವುದು, ಮೂಲ ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಹಾಗೂ ಚಿಂತನ ಕೌಶಲ್ಯವನ್ನು ವರ್ಧಿಸಬೇಕೆಂಬ ಉದ್ದೇಶದಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೆರವಿನೊಂದಿಗೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಈ ಯೋಜನೆಯನ್ನು ಕೈಗೊಂಡಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ ಕಡ್ಲೇವಾಡ ತಿಳಿಸಿದ್ದಾರೆ.
ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೇಂದ್ರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಅಥವಾ ಕರಾವಿಪ ವೆಬ್‌ಸೈಟ್ (www.krvp.org ), ವಾಟ್ಸಪ್‌ನಿಂದ ಅರ್ಜಿ/ ಮಾಹಿತಿಯನ್ನು ಪಡೆಯ ಬಹುದು.
ಭಾಗವಹಿಸಲು ಇಚ್ಚಿಸುವವರು ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜೂನ್ 14ರೊಳಗೆ ತಮ್ಮ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿಗೆ ಹಾಗೂ ಅರ್ಜಿಯ ಒಂದು ಪ್ರತಿಯನ್ನು ಕರಾವಿಪ ಕೇಂದ್ರ ಕಚೇರಿಗೆ ಸಲ್ಲಿಸಬೇಕು.
ಇದಕ್ಕಾಗಿ ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಜೂ.23ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲದಲ್ಲಿ ಆಯೋಜಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ಯುವ ವಿಜ್ಞಾನಿಗಳು ರಾಜ್ಯಮಟ್ಟದ ಯುವ ವಿಜ್ಞಾನಿಗಳ ಸಮಾವೇಶದಲ್ಲಿ ಬಾಗವಹಿಸಲು ಅರ್ಹತೆ ಪಡೆಯುತ್ತಾರೆ. ಜಿಲ್ಲಾ ಮಟ್ಟದ ಬಹುಮಾನಗಳ ವಿವರ: ಪ್ರಥಮ ರೂ.5000, ದ್ವಿತೀಯ ರೂ.3000 ಹಾಗೂ ತೃತೀಯ ರೂ.2000. ರಾಜ್ಯ ಮಟ್ಟದ 4 ಯುವ ವಿಜ್ಞಾನಿಗಳಿಗೆ ತಲಾ ರೂ.10000 ನೀಡಲಾಗುವುದು.
ರಾಜ್ಯ ಮಟ್ಟದ ಸ್ಪರ್ಧೆಯು 3 ದಿನಗಳ ಕಾಲ ಸಮಾವೇಶದ ರೂಪದಲ್ಲಿ ಜರುಗಲಿದ್ದು, ಖ್ಯಾತ ವಿಜ್ಞಾನಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದಿಸುವರು. ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕರಾವಿಪ ಕಚೇರಿ ದೂರವಾಣಿ: 080-26718939, ಮೊಬೈಲ್: 9483549159/9008442557 / 9449530245 ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.







