ಟೆಸ್ಟ್ ಕ್ರಿಕೆಟ್ ಕೊನೆಯಾಗಲಿದೆ: ಮೆಕಲಮ್ ಭವಿಷ್ಯ

ಹೊಸದಿಲ್ಲಿ, ಮೇ 14: ಇನ್ನೇನು ಕೆಲವೇ ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್ ಕೊನೆಯಾಗಲಿದೆ ಎಂದು ನ್ಯೂಝಿಲ್ಯಾಂಡ್‌ನ ಮಾಜಿ ನಾಯಕ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಬ್ರೆಂಡನ್ ಮೆಕಲಮ್ ಭವಿಷ್ಯ ನುಡಿದಿದ್ದಾರೆ. ತಮ್ಮ ಹೇಳಿಕೆಗೆ ಸಮರ್ಥನೆ ನೀಡಿರುವ ಅವರು, ಐಸಿಸಿ ಕ್ರಿಕೆಟ್ ಆಡುವ ಹೊಸ ದೇಶಗಳಿಗೆ ಟೆಸ್ಟ್ ಮಾನ್ಯತೆ ನೀಡಿದ್ದರೂ ಕೆಲವೇ ದೇಶಗಳು ಮಾತ್ರ ಟೆಸ್ಟ್ ಆಡುವ ಸಂಪನ್ಮೂಲವನ್ನು ಹೊಂದಿವೆ. ಮುಖ್ಯವಾಗಿ ಟ್ವೆಂಟಿ 20 ಕ್ರಿಕೆಟ್‌ನ ಉಗಮದ ನಂತರ ಜನರು ಚುಟುಕು ಪಂದ್ಯದತ್ತಲೇ ಹೆಚ್ಚು ಆಕರ್ಷಿತರಾಗುತ್ತಿದ್ದು ಐದು ದಿನಗಳ ಪಂದ್ಯಗಳಿಗೆ ಜನ ಬೆಂಬಲ ಕಡಿಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕ್ರಿಕೆಟ್ ಕೂಡಾ ಫುಟ್ಬಾಲ್ ಮಾದರಿಯಲ್ಲಿ ಕ್ಲಬ್ ಸಂಸ್ಕೃತಿಯನ್ನು ಬೆಳೆಸಿಕೊಳ್ಳಲಿದೆ. ಇದರಿಂದಾಗಿ ಆಟಗಾರರು ತಾವು ಆಡುವ ತಂಡಗಳಿಗೆ ನಿಷ್ಠರಾಗಿ ಉಳಿಯಲು ಬಯಸಿ ತಮ್ಮ ದೇಶೀಯ ತಂಡದಲ್ಲಿ ಆಡಲು ನಿರಾಕರಿಸುವ ದಿನಗಳು ಬರಲಿವೆ ಎಂದು ತಿಳಿಸಿದ್ದಾರೆ. ಟೆಸ್ಟ್ ಕ್ರಿಕೆಟನ್ನು ಉಳಿಸಲು ಐಸಿಸಿ ಹೆಚ್ಚಿನ ದೇಶಗಳಿಗೆ ಟೆಸ್ಟ್ ಮಾನ್ಯತೆಯನ್ನು ನೀಡುತ್ತಿದ್ದು ಈಗಾಗಲೇ ಐರ್ಲ್ಯಾಂಡ್ ಈ ಮಾನ್ಯತೆ ಪಡೆದಿದ್ದರೆ ಮುಂದಿನ ತಿಂಗಳು ಬೆಂಗಳೂರಿನಲ್ಲಿ ಭಾರತದ ವಿರುದ್ಧ ಆಡುವ ಮೂಲಕ ಅಫ್ಘಾನಿಸ್ತಾನ ಕೂಡಾ ಈ ಪಟ್ಟಿಗೆ ಸೇರಲಿದೆ. ಜೊತೆಗೆ ಹಗಲು/ರಾತ್ರಿ ಟೆಸ್ಟ್ ಪಂದ್ಯಾಟವನ್ನೂ ಪರಿಚಯಿಸಲಾಗಿದೆ. ಆದರೂ ಕ್ರಿಕೆಟ್ ತಜ್ಞರು ಮತ್ತು ಮಾಜಿ ಆಟಗಾರರು ಟೆಸ್ಟ್ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಆಶಾವಾದವನ್ನು ಹೊಂದಿಲ್ಲ ಎಂದು ಕ್ರೀಡಾ ಜಾಲತಾಣ ವರದಿ ಮಾಡಿದೆ.







