ನೇಮರ್ ಫ್ರಾನ್ಸ್ ನ ವರ್ಷದ ಆಟಗಾರ

ಪ್ಯಾರಿಸ್, ಮೇ 14: ಪ್ಯಾರಿಸ್‌ನಲ್ಲಿ ರವಿವಾರ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬ್ರೆಝಿಲ್‌ನ ಫುಟ್ಬಾಲ್ ಆಟಗಾರ ನೇಮರ್ ಫ್ರಾನ್ಸ್ ವರ್ಷದ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಪ್ಯಾರಿಸ್ ಸೇಂಟ್-ಜರ್ಮೈನ್ ತಂಡದ ಪರವಾಗಿ ಆಡುವ ನೇಮರ್ ಗಾಯದ ಸಮಸ್ಯೆಯಿಂದಾಗಿ ಕಳೆದ ಮೂರು ತಿಂಗಳುಗಳಿಂದ ಮೈದಾನಕ್ಕಿಳಿಯದಿದ್ದರೂ ಪ್ರಶಸ್ತಿ ಓಟದಲ್ಲಿ ಅಗ್ರಸ್ಥಾನದಲ್ಲಿದ್ದರು. ಕಳೆದ ಫೆಬ್ರವರಿಯಲ್ಲಿ ಕಾಲಿನ ಗಾಯದ ಸಮಸ್ಯೆಯಿಂದ ಬಳಲಿ ಸ್ವದೇಶ ಬ್ರೆಝಿಲ್‌ಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗುವುದಕ್ಕೂ ಮುನ್ನ ನೇಮರ್ ಪಿಎಸ್‌ಜಿ ಪರ 20 ಲೀಗ್ ಪಂದ್ಯಗಳಲ್ಲಿ ಆಡಿ 19 ಗೋಲ್‌ಗಳನ್ನು ಬಾರಿಸಿದ್ದರು.
ನೇಮರ್ ತನ್ನ ಸಹಆಟಗಾರರಾದ ಎಡಿನ್ಸನ್ ಕವನಿ ಮತ್ತು ಕೈಲಿಯನ್ ಬಪ್ಪೆಯನ್ನು ಹಿಂದಿಕ್ಕಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಎಸ್‌ಪಿಜಿ ತಂಡವು ನೇಮರ್‌ನನ್ನು ಬಾರ್ಸಿಲೋನಾದಿಂದ ದಾಖಲೆಯ 222 ಮಿಲಿಯನ್ ಯೂರೋಗಳಿಗೆ (264 ಮಿಲಿಯನ್ ಡಾಲರ್) ಖರೀದಿಸಿತ್ತು. ತನಗೆ ನೀಡಿದ ಮೊತ್ತಕ್ಕೆ ಸಂಪೂರ್ಣ ನ್ಯಾಯ ದೊರಕಿಸಿದ ನೇಮರ್ ಎಸ್‌ಪಿಜಿ ಆಡಿದ ಎಲ್ಲ ದೇಶೀಯ ಪಂದ್ಯಾಟಗಳಲ್ಲಿ ಜನ ಸಾಧಿಸುವಂತೆ ನೋಡಿಕೊಂಡಿದ್ದರು. ಆದರೆ ಗಾಯದ ಸಮಸ್ಯೆಯಿಂದಾಗಿ ಚಾಂಪಿಯನ್ಸ್ ಲೀಗ್‌ನಲ್ಲಿ ರಿಯಲ್ ಮ್ಯಾಡ್ರಿಡ್ ವಿರುದ್ಧದ ಪಂದ್ಯದಲ್ಲಿ ನೇಮರ್ ಆಡದೆ ಇದ್ದ ಕಾರಣ ಪಿಎಸ್‌ಜಿ 5-2ರಿಂದ ಪಂದ್ಯವನ್ನು ಸೋತಿತ್ತು. ನೇಮರ್ ಬ್ರೆಝಿಲ್‌ನ ರಾಷ್ಟ್ರೀಯ ತಂಡದ ಆಟಗಾರರೂ ಆಗಿದ್ದು ರಶ್ಯಾದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಸ್ವದೇಶವನ್ನು ಪ್ರತಿನಿಧಿಸಲಿದ್ದಾರೆ.







