ದ.ಕ.ಜಿಲ್ಲೆಯ ಮತ ಎಣಿಕೆ ಆರಂಭ

ಮಂಗಳೂರು, ಮೇ 15: ದ.ಕ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭಗೊಂಡಿದೆ.
ನಗರದ ಬೊಂದೇಲ್‌ನ ಮಹಾತ್ಮಗಾಂಧಿ ಶತಾಬ್ಧಿ ಹಿ. ಪ್ರಾ. ಶಾಲೆ/ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ವಿವಿಧ ಪಕ್ಷಗಳ, ಪಕ್ಷೇತರ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಸೇರಿದ್ದು, ತಮ್ಮದೇ ಆದ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.
ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದ್ದು, ಬಳಿಕ ಇವಿಎಂನಲ್ಲಿ ದಾಖಲಾದ ಮತಗಳ ಎಣಿಕೆ ನಡೆಯಲಿದೆ. ಪ್ರತಿ ಮತ ಎಣಿಕೆ ಟೇಬಲ್‌ನಲ್ಲಿ ಮತ ಎಣಿಕೆ ಮೇಲ್ವಿಚಾರಕರು, ಸಹಾಯಕ ಸಿಬ್ಬಂದಿ ಮತ್ತು ಮೈಕ್ರೋ ವೀಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಜಿಲ್ಲೆಯ 1858 ಮತಗಟ್ಟೆಗಳ ಮತ ಎಣಿಕೆಯು ಗರಿಷ್ಠ 18 ಸುತ್ತುಗಳಲ್ಲಿ ನಡೆಯಲಿವೆ. ಮತ ಎಣಿಕೆಯ ಕೊಠಡಿಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮತ್ತು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬಿಗುಬಂದೋಬಸ್ತ್: ಇವಿಎಂ/ವಿವಿ ಪ್ಯಾಟ್‌ಗಳನ್ನಿಡಲಾದ ಭದ್ರತಾ ಕೊಠಡಿಗಳಿರುವ ಮತ ಎಣಿಕೆ ಕೇಂದ್ರದ ಆವರಣದ 100 ಮೀ ವ್ಯಾಪ್ತಿಯೊಳಗೆ ಮೂರು ಹಂತದಲ್ಲಿ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಅನಧಿಕೃತ ವ್ಯಕ್ತಿ, ವಾಹನಗಳು ಪ್ರವೇಶಿಸದಂತೆ ತಡೆ ಬೇಲಿಯನ್ನು ನಿರ್ಮಿಸಿ ಭದ್ರತಾ ವಲಯ ಸ್ಥಾಪಿಸಲಾಗಿದೆ. ಮತ ಎಣಿಕೆಯ ಪ್ರವೇಶದ್ವಾರದ ಬಳಿ ಗೇಟು ನಿರ್ಮಿಸಿ ಅದನ್ನು ಹಾದು ಹೋಗುವ ಎಲ್ಲಾ ಜಿಲ್ಲಾ ಚುನಾವಣಾಧಿಕಾರಿಯಿಂದ ನಿಯೋಜಿತ ಅಧಿಕಾರಿ, ಸಿಬ್ಬಂದಿಯವರು ಹೊಂದಿರುವ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪರಿಶೀಲಿಸಲು ಸ್ಥಳೀಯ ಪೊಲೀಸರನ್ನು ಕರ್ತವ್ಯದಲ್ಲಿರಿಸಲಾಗಿದೆ. 2ನೆ ಹಂತದ ಭದ್ರತೆ ಮತ ಎಣಿಕೆ ಆವರಣದ ಮಧ್ಯದಲ್ಲಿ ಗೇಟು ನಿರ್ಮಿಸಿ ಶಸ್ತ್ರ ಸಜ್ಜಿತ ರಾಜ್ಯ ಪೊಲೀಸ್ ಪಡೆಗಳನ್ನು ಕರ್ತವ್ಯದಲ್ಲಿರಿಸಲಾಗಿದೆ.
ಮತ ಎಣಿಕೆ ಕೇಂದ್ರವನ್ನು ಪ್ರವೇಶಿಸುವ ವ್ಯಕ್ತಿಗಳು ಬೆಂಕಿ ಪೆಟ್ಟಿಗೆ, ಶಸ್ತ್ರಾಸ್ತ್ರ ಸೇರಿದಂತೆ ಪ್ರತಿಬಂಧಕ ವಸ್ತುಗಳನ್ನು ಒಯ್ಯುದಂತೆ ತಡೆಯಲಾಗಿದೆ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್, ಐಪ್ಯಾಡ್, ಲ್ಯಾಪ್‌ಟಾಪ್ ಇತ್ಯಾದಿ ಇಲೆಕ್ಟ್ರಾನಿಕ್ ಉಪಕರಣ ಹಾಗೂ ಆಡಿಯೋ ವೀಡಿಯೋ ರೆಕಾರ್ಡ್‌ರ್‌ಗಳನ್ನು ನಿಷೇಧಿಸಲಾಗಿದೆ. ಒಟ್ಟಿನಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.







