ಮಧುಮೇಹದ ಲಕ್ಷಣಗಳೇಕೆ ಮೊದಲೇ ಗೊತ್ತಾಗುವುದಿಲ್ಲ....?
ಭಾರತವು ವಿಶ್ವದಲ್ಲಿ ‘ಮಧುಮೇಹದ ರಾಜಧಾನಿ’ಎಂಬ ಕುಖ್ಯಾತಿಯನ್ನು ಹೊಂದಿದ್ದು, 72 ಮಿಲಿಯನ್‌ಗೂ ಅಧಿಕ ಜನರು ದೇಶದಲ್ಲಿ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಮಧುಮೇಹ ಇತ್ತೀಚಿಗೆ ಸಾಮಾನ್ಯವಾಗಿದ್ದು,ಎಲ್ಲ ವಯೋಮಾನ ದವರಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ದುರದೃಷ್ಟವೆಂದರೆ ಈ ಕಾಯಿಲೆಯು ಒಕ್ಕರಿಸುವವರೆಗೆ ಅದರ ಲಕ್ಷಣಗಳು ಪತ್ತೆಯಾಗುವುದೇ ಇಲ್ಲ. ಹೆಚ್ಚಿನ ಪ್ರಕರಣಗಳಲ್ಲಿ ಮಾಮೂಲು ವೈದ್ಯಕೀಯ ತಪಾಸಣೆಯ ಸಂದರ್ಭದಲ್ಲಿಯೇ ವ್ಯಕ್ತಿಗೆ ತನ್ನ ರಕ್ತದಲ್ಲಿ ಗ್ಲುಕೋಸ್ ಮಟ್ಟ ಏರಿಕೆಯಾಗಿರುವುದು ಗೊತ್ತಾಗುತ್ತದೆ. ವೈದ್ಯಕೀಯ ತಪಾಸಣೆಯ ಗೋಜಿಗೆ ಹೋಗದವರಿಗೆ ತಮಗೆ ಮಧುಮೇಹವಿದ್ದರೂ ಗೊತ್ತೇ ಆಗುವುದಿಲ್ಲ. ಅಲ್ಲದೆ ಅತಿಯಾದ ಬಳಲಿಕೆ,ತೂಕ ಇಳಿಕೆ ಮತ್ತು ಹೆಚ್ಚಿನ ಬಾಯಾರಿಕೆಯಂತಹ ಮಧುಮೇಹದ ಲಕ್ಷಣಗಳನ್ನು ಕಡೆಗಣಿಸುವವರೇ ಹೆಚ್ಚು. ಅಷ್ಟಕ್ಕೂ ಮಧುಮೇಹದ ಲಕ್ಷಣಗಳು ಮೊದಲೇ ಏಕೆ ಪತ್ತೆಯಾಗುವುದಿಲ್ಲ? ಉತ್ತರ ಇಲ್ಲಿದೆ.....
ಟೈಪ್ 1 ಮಧುಮೇಹವು ನಮ್ಮ ಶರೀರದ ನಿರೋಧಕ ಶಕ್ತಿಯು ತಪ್ಪಾಗಿ ಆರೋಗ್ಯಯುತ ಜೀವಕೋಶಗಳ ಮೇಲೆ ದಾಳಿನಡೆಸಿದಾಗ ಬರುವ ಕಾಯಿಲೆಯಾಗಿದ್ದು,ಇದು ತನ್ನದೇ ಆದ ಲಕ್ಷಣಗಳನ್ನು ಹೊಂದಿದೆ. ಆದರೆ ಟೈಪ್ 2 ಮಧುಮೇಹ ಇಂತಹ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಅಲ್ಲದೆ ಹೆಚ್ಚಿನ ಮೂತ್ರವಿಸರ್ಜನೆ ಮತ್ತು ಅತಿಯಾದ ಬಾಯಾರಿಕೆಯಂತಹ ಮಧುಮೇಹದ ಲಕ್ಷಣಗಳು ಸ್ವರೂಪದಲ್ಲಿ ನಿರ್ದಿಷ್ಟವಾಗಿರುವುದಿಲ್ಲ,ಹೀಗಾಗಿ ಅವುಗಳನ್ನು ಎಚ್ಚರಿಕೆಯ ಸಂಕೇತಗಳೆಂದು ಪರಿಗಣಿಸಲಾಗುವುದಿಲ್ಲ. ಈ ಲಕ್ಷಣಗಳನ್ನು ಕಡೆಗಣಿಸಲಾಗುವುದರಿಂದ ರಕ್ತದಲ್ಲಿ ಗುಕೋಸ್ ಮಟ್ಟವು ಹೆಚ್ಚಾಗಿ ಮೂತ್ರಪಿಂಡಗಳು,ಕಣ್ಣುಗಳು ಮತ್ತು ಹೃದಯದಂತಹ ಇತರ ಅಂಗಗಳ ಮೇಲೆ ದಾಳಿ ಆರಂಭಿಸುವವರೆಗೆ ಮಧುಮೇಹ ಪತ್ತೆಯಾಗುವುದಿಲ್ಲ.
ಅಲ್ಲದೆ ಟೈಪ್ 2 ಮಧುಮೇಹವು ಅತ್ಯಂತ ನಿಧಾನವಾಗಿ ಬೆಳವಣಿಗೆಯಾಗುವುದರಿಂದ ಅದರ ಪ್ರಮುಖ ಲಕ್ಷಣಗಳು ಅಷ್ಟು ಸುಲಭವಾಗಿ ಕಾಣಿಸಿಕೊಳ್ಳುವುದಿಲ್ಲ. ವ್ಯಕ್ತಿಯು ಈ ಸ್ಥಿತಿಯಿಂದ ಬಳಲುತ್ತಿರುವಾಗ ಇನ್ಸುಲಿನ್ ಉತ್ಪಾದನೆಯು ಕ್ರಮೇಣ ಕಡಿಮೆಯಾಗುತ್ತಿರುತ್ತದೆ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಇದು ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಇದರಿಂದ ಶರೀರವು ಗ್ಲುಕೋಸ್‌ನ್ನು ಹೀರಿಕೊಳ್ಳುವ ಕಾರ್ಯಕ್ಕೆ ಅಡ್ಡಿಯುಂಟಾಗುತ್ತದೆ. ಇದು ಕೂಡ ನಿಧಾನವಾಗಿ ನಡೆಯುವುದರಿಂದ ಶರೀರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅದು ಒಗ್ಗಿಕೊಳ್ಳುವುದರಿಂದ ಸುಲಭವಾಗಿ ಗಮನಕ್ಕೆ ಬರುವುದಿಲ್ಲ.
ಆದರೆ ಕಾಲಕ್ರಮೇಣ ಇನ್ಸುಲಿನ್ ಉತ್ಪಾದನೆ ತೀವ್ರವಾಗಿ ಕುಂಠಿತಗೊಳ್ಳುತ್ತದೆ ಮತ್ತು ಇದರಿಂದಾಗಿ ಗ್ಲುಕೋಸ್ ಶರೀರದಲ್ಲಿ ಸಂಗ್ರಹಗೊಂಡು ಮೊದಲ ಬಾರಿಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಮಧುಮೇಹವನ್ನು ಬೇಗನೇ ಪತ್ತೆ ಹಚ್ಚುವುದು ಹೇಗೆ?
ವ್ಯಕ್ತಿಯು ಆಗಾಗ್ಗೆ ಮಧುಮೇಹ ತಪಾಸಣೆಗೊಳಗಾಗುತ್ತಿದ್ದರೆ ಮತ್ತು ಲಕ್ಷಣಗಳ ಮೆಲೆ ನಿಕಟ ನಿಗಾಯಿರಿಸಿದ್ದರೆ ಅಥವಾ ಅಪಾಯದ ಅಂಶಗಳನ್ನು ತಿಳಿದಿದ್ದರೆ ಮಾತ್ರ ಈ ರೋಗವನ್ನು ಆರಂಭದ ಹಂತದಲ್ಲಿ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಹೀಗಾಗಿ ವ್ಯಕ್ತಿಯು ಟೈಪ್ 2 ಮಧುಮೇಹ ಅಪಾಯದ ಗುಂಪಿನಲ್ಲಿದ್ದಾನೆಯೇ ಎನ್ನುವುದನ್ನು ತಿಳಿದುಕೊಳ್ಳುವದು ಮೊದಲ ಕೆಲಸವಾಗುತ್ತದೆ.
ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುವ ಅಂಶಗಳು
ಅತಿಯಾದ ತೂಕ ಅಥವಾ ಬೊಜ್ಜು: 25 ಅಥವಾ ಅದಕ್ಕಿಂತ ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್(ಬಿಎಂಐ) ಹೊಂದಿರುವ ಮತ್ತು ಮಧುಮೇಹಕ್ಕೆ ಗುರಿಯಾಗುವ ಅಪಾಯ ಹೆಚ್ಚಿರುವ ವ್ಯಕ್ತಿಗಳು ಆಗಾಗ್ಗೆ ತಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಪಾಸಣೆ ಮಾಡಿಸುತ್ತಿರಬೇಕು. ಕುಟುಂಬದಲ್ಲಿ ಯಾರಿಗಾದರೂ ಮಧುಮೇಹವಿದ್ದ ಇತಿಹಾಸ,ಅಧಿಕ ಕೊಲೆಸ್ಟ್ರಾಲ್,ಹೆಚ್ಚಿನ ರಕ್ತದೊತ್ತಡ ಅಥವಾ ಹೃದ್ರೋಗ ಇವು ಮಧುಮೇಹವನ್ನುಂಟು ಮಾಡುವ ಅಪಾಯವಿದೆ.
ಅಲ್ಲದೆ ಹೆಚ್ಚಿನ ಚಟುವಟಿಕೆಗಳಿಲ್ಲದ ಜೀವನಶೈಲಿ ಮತ್ತು ಮಹಿಳೆಯರು ಹಾರ್ಮೋನ್ ಸ್ರವಿಸುವಿಕೆಯಲ್ಲಿನ ಅಸಮತೋಲನದಿಂದಾಗಿ ಉಂಟಾಗುವ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದರೆ ಹಾಗೂ ಅಧಿಕ ದೇಹತೂಕವನ್ನು ಹೊಂದಿದ್ದರೆ ಕಡ್ಡಾಯವಾಗಿ ಮಧುಮೇಹ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.
ಮಧುಮೇಹದ ಗಡಿರೇಖೆ ಎಂದೇ ಗುರುತಿಸಲಾಗುವ ಪ್ರಿ ಡಯಾಬಿಟಿಸ್‌ನಿಂದ ಬಳಲುತ್ತಿರುವವರು ವರ್ಷಕ್ಕೊಮ್ಮೆಯಾದರೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು. ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸದಿದ್ದರೆ ಅವರು ಮಧುಮೇಹಕ್ಕೆ ಗುರಿಯಾಗುವ ಹೆಚ್ಚಿನ ಅಪಾಯವಿರುತ್ತದೆ.
ಗರ್ಭಿಣಿ ಮಹಿಳೆಯರಲ್ಲಿ ಮಧುಮೇಹವು ಕಾಣಿಸಿಕೊಂಡಿದ್ದರೆ ಹೆರಿಗೆಯ ನಂತರ ರಕ್ತದಲ್ಲಿಯ ಸಕ್ಕರೆಯ ಮಟ್ಟವು ನಿಯಂತ್ರಣದಲ್ಲಿದ್ದರೂ ಪ್ರತಿ ಮೂರು ವರ್ಷಗಳಿಗೊಮ್ಮೆ ಮಧುಮೇಹ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು.
45 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರು ಕನಿಷ್ಠ ವರ್ಷಕ್ಕೊಮ್ಮೆಯಾದರೂ ಮಧುಮೇಹ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಇದರಿಂದ ವಯಸ್ಸಾಗುತ್ತಿದ್ದಂತೆ ರಕ್ತದಲ್ಲಿ ಗ್ಲುಕೋಸ್ ಮಟ್ಟದಲ್ಲಿ ಬದಲಾವಣೆಗಳನ್ನು ಪತ್ತೆ ಹಚ್ಚಲು ಮತ್ತು ಆರಂಭದ ಹಂತದಲ್ಲಿಯೇ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಮಧುಮೇಹ ರೋಗದ ಮುಂದುವರಿದ ಹಂತದಲ್ಲಿ ಮಾತ್ರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಲಕ್ಷಣಗಳ ಆಧಾರದಲ್ಲಿ ಈ ರೋಗವನ್ನು ಮೊದಲೇ ನಿರ್ಧರಿಸುವುದು ಕಠಿಣವಾಗಿದೆ. ಆದರೆ ಬಾಯಿಯಲ್ಲಿಯ ಹುಣ್ಣುಗಳು ಅಥವಾ ಗಾಯಗಳ ನಿಧಾನ ಮಾಯುವಿಕೆಯಂತಹ ಕೆಲವು ಲಕ್ಷಣಗಳು ಮಧುಮೇಹದ ಬಗ್ಗೆೆ ಸುಳಿವು ತಿಳಿಯಲು ನೆರವಾಗುತ್ತವೆ. ಅಂತಹ ಸಂದರ್ಭದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಂಡರೆ ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಿದೆಯೇ ಎನ್ನುವುದು ಗೊತ್ತಾಗುತ್ತದೆ. ಇಂದಿನ ಜೀವನಶೈಲಿಯನ್ನು ಪರಿಗಣಿಸಿದರೆ ಪ್ರತಿಯೊಬ್ಬ ವ್ಯಕ್ತಿಗೂ ಮಧುಮೇಹಕ್ಕೆ ತುತ್ತಾಗುವ ಅಪಾಯವಿದೆ. ಆದರೆ ರೋಗಲಕ್ಷಣಗಳು ಗುಪ್ತವಾಗಿಯೇ ಇದ್ದರೂ,ಶರೀರದಲ್ಲಿ ಬದಲಾವಣೆಗಳ ಬಗ್ಗೆ ಎಚ್ಚರಿಕೆ ವಹಿಸಿ ಆಗಾಗ್ಗೆ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರೆ ಮಧುಮೇಹವನ್ನು ಆರಂಭದ ಹಂತದಲ್ಲಿಯೇ ಪತ್ತೆ ಹಚ್ಚಲು ಸಾಧ್ಯವಿದೆ.