ಕೊಲೆ ಪ್ರಕರಣ : ಸಿಧುಗೆ ಕೇವಲ ದಂಡ ವಿಧಿಸಿ ದೋಷಮುಕ್ತಿಗೊಳಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಮೇ 15: ಪಂಜಾಬ್ ಸಚಿವ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು 1988ರಲ್ಲಿ ಪಟಿಯಾಲದ ರಸ್ತೆಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ದೋಷಮುಕ್ತಿಗೊಳಿಸಿ ಕೆಳಗಿನ ಹಂತದ ನ್ಯಾಯಾಲಯದ ಆದೇಶವೊಂದನ್ನು ಬದಿಗಿರಿಸಿದೆ.
ಆದರೆ ಜಸ್ಟಿಸ್ ಜೆ ಚೆಲಮೇಶ್ವರ್ ಹಾಗೂ ಜಸ್ಟಿಸ್ ಸಂಜಯ್ ಕಿಶನ್ ಕೌಲ್ ಅವರನ್ನೊಳಗೊಂಡ ಪೀಠವು ಸಿಧು ರನ್ನು ವ್ಯಕ್ತಿಯೊಬ್ಬರಿಗೆ ಸಣ್ಣ ಪ್ರಮಾಣದ ಗಾಯಗಳುಂಟು ಮಾಡಿದ್ದಕ್ಕೆ ಐಪಿಸಿ ಸೆಕ್ಷನ್ 323 ಅನ್ವಯ ಅಪರಾಧಿಯೆಂದು ಘೋಷಿಸಿ ಅವರಿಗೆ ದಂಡ ವಿಧಿಸಿದೆ. ಪ್ರಕರಣದ ಇನ್ನೋರ್ವ ಆರೋಪಿಯಾಗಿದ್ದ ಸಿಧು ಅವರ ಸಮೀಪವರ್ತಿ ರೂಪೀಂದರ್ ಸಿಂಗ್ ಸಂಧು ಅವರನ್ನೂ ನ್ಯಾಯಾಲಯ ದೋಷಮುಕ್ತಿಗೊಳಿಸಿದೆ.
ಡಿಸೆಂಬರ್ 27, 1988ರಂದು ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧು ಅವರನ್ನು ದೋಷಿಯೆಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶ ವನ್ನು ಎತ್ತಿ ಹಿಡಿಯುವಂತೆ ಕೋರಿ ಪಂಜಾಬ್ ಸರಕಾರ ಸುಪ್ರೀಂ ಕೋರ್ಟಿನ ಕದ ತಟ್ಟಿತ್ತು. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಸಿಧುಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದ್ದರೂ ಸುಪ್ರೀಂ ಕೋರ್ಟ್ ಜಾಮೀನು ನೀಡಿತ್ತು. ಸಂತ್ರಸ್ತನ ಕುಟುಂಬ ಸುಪ್ರೀಂ ಕೋರ್ಟ್ ಮೊರೆ ಹೋಗಿ ಜೈಲು ಶಿಕ್ಷೆಯ ಅವಧಿಯನ್ನು ಇನ್ನಷ್ಟು ವಿಸ್ತರಿಸಬೇಕೆಂದು ಕೋರಿತ್ತು.
ಸಿಧುರನ್ನು ದೋಷಮುಕ್ತಗೊಳಿಸಿದ ತೀರ್ಪನ್ನು 2007ರಲ್ಲಿ ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್, ಚುನಾವಣೆ ಸ್ಪರ್ಧಿಸಲು ಅನುವು ಮಾಡಿ ಕೊಟ್ಟಿತ್ತು.
ಸಿಧು 65 ವರ್ಷದ ಗುರ್ನಾಮ್ ಸಿಂಗ್ ಎಂಬವರ ಜತೆ ಜಗಳಕ್ಕಿಳಿದು ಅವರಿಗೆ ಹೊಡೆದಿದ್ದರೆನ್ನಲಾಗಿದೆ. ಸಿಂಗ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರು ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದರು.







