ತುರ್ತು ಭೂಸ್ಪರ್ಶ ಮಾಡಿದ ಆದಿತ್ಯನಾಥ್ ಹೆಲಿಕಾಪ್ಟರ್

ಕಸ್ಗಂಜ್, ಮೇ 15: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಕಸ್ಗಂಜ್ ನಲ್ಲಿನ ಶಾಲಾ ಮೈದಾನದಲ್ಲಿ ನಿರ್ಮಿಸಲಾದ ಹೆಲಿಪ್ಯಾಡ್ ನಲ್ಲಿ ಇಳಿಯುವ ಬದಲು ತುರ್ತಾಗಿ ಗದ್ದೆಯೊಂದರಲ್ಲಿ ಇಳಿದ ಘಟನೆ ಮಂಗಳವಾರ ವರದಿಯಾಗಿದೆ.
ಆದಿತ್ಯನಾಥ್ ಅವರು ಸುರಕ್ಷಿತವಾಗಿದ್ದು, ತಮ್ಮ ಮುಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಲ್ಲಿಂದ ತೆರಳಿದ್ದಾರೆ. ಮುಖ್ಯಮಂತ್ರಿಯ ಹೆಲಿಕಾಪ್ಟರ್ ಕಸ್ಗಂಜ್ ನ ಕಸ್ತೂರ್ಬಾ ಗಾಂಧಿ ವಿದ್ಯಾಲಯದ ಅಂಗಳದಲ್ಲಿ ಇಳಿಯಬೇಕಿದ್ದರೂ ತಾಂತ್ರಿಕ ಸಮಸ್ಯೆಯಿಂದಾಗಿ ಅಲ್ಲಿಂದ ಕೆಲ ಕಿಲೋಮೀಟರುಗಳಷ್ಟು ದೂರದಲ್ಲಿದ್ದ ಗದ್ದೆಯೊಂದರಲ್ಲಿ ಇಳಿದಿದೆ. ಜಿಲ್ಲೆಯ ಸಹವರ್ ತೆಹ್ಸಿಲ್ ಎಂಬಲ್ಲಿನ ಫರೌಲಿ ಎಂಬ ಗ್ರಾಮದಲ್ಲಿ ಇತ್ತೀಚೆಗೆ ಕೊಲೆಗೀಡಾದ ಮೂರು ಮಂದಿಯ ಕುಟುಂಬವನ್ನು ಭೇಟಿಯಾಗಲು ಮುಖ್ಯಮಂತ್ರಿ ಅಲ್ಲಿಗೆ ಆಗಮಿಸಿದ್ದರು.
ತಮ್ಮ ಭೇಟಿಯ ವೇಳೆ ಅವರು ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಕಾನೂನು ಸುವ್ಯವಸ್ಥೆಯನ್ನೂ ಪರಿಶೀಲಿಸಿದರು.
Next Story





