ಶಿಕ್ಷಣಕ್ಕೆ ಅಡ್ಡಿಯಾದ ಬಡತನ: ಹಿಂದೂ ಯುವತಿಗೆ ಸಹಾಯಹಸ್ತ ಚಾಚಿದ ಮುಸ್ಲಿಂ ಮಹಲ್ ಸಮಿತಿ

ತಿರುವನಂತಪುರಂ, ಮೇ 15: ಬಡತನದ ಕಾರಣದಿಂದಾಗಿ ಉನ್ನತ ಶಿಕ್ಷಣವನ್ನು ಮೊಟಕುಗೊಳಿಸುವ ಅನಿವಾರ್ಯತೆ ಎದುರಿಸುತ್ತಿದ್ದ ಹಿಂದೂ ಯುವತಿಯೊಬ್ಬಳಿಗೆ ಸಹಾಯಹಸ್ತ ಚಾಚಿ ಮಲಪ್ಪುರಂ ಜಿಲ್ಲೆಯ ಪುಝಕ್ಕಟ್ಟಿರಿ ಎಂಬಲ್ಲಿನ ಮುಸ್ಲಿಂ ಮಹಲ್ ಸಮಿತಿ ಧಾರ್ಮಿಕ ಸಾಮರಸ್ಯದ ಸಂಕೇತವಾಗಿ ಹೊರಹೊಮ್ಮಿದೆ.
ಈ ಗ್ರಾಮದ ದಿನಗೂಲಿ ಕಾರ್ಮಿಕ ರಮೇಶ್ ಹಾಗೂ ಸಂತ ಎಂಬ ಬಡ ದಂಪತಿಯ ಪುತ್ರಿಯಾದ ಸತ್ಯಾ ಬಿಎಸ್ಸಿ ನರ್ಸಿಂಗ್ ಶಿಕ್ಷಣ ಪಡೆಯುತ್ತಿದ್ದಾರೆ. ಸತ್ಯ ತನ್ನ ಪ್ಲಸ್ ಟೂ ಪರೀಕ್ಷೆಯಲ್ಲಿ ಶೇ 57 ಅಂಕಗಳನ್ನು ಪಡೆದಿದ್ದರಿಂದ ರಾಷ್ಟ್ರೀಕೃತ ಬ್ಯಾಂಕಿನಿಂದ ಶೈಕ್ಷಣಿಕ ಸಾಲಕ್ಕೆ ಅರ್ಹಳಾಗಿರಲಿಲ್ಲ. ಕೊನೆಗೆ ಇತರೆಡೆಗಳಿಂದ ಸಾಲ ಪಡೆದು ಆಕೆಯ ಮೊದಲ ಎರಡು ವರ್ಷದ ಶುಲ್ಕವನ್ನು ಆಕೆಯ ಹೆತ್ತವರು ಪಾವತಿಸಿದ್ದರು. ಆದರೆ ನವೆಂಬರ್ 2017ರಲ್ಲಿ ಆಕೆಯ ತಂದೆ ಅನಾರೋಗ್ಯದಿಂದ ಮೃತಪಟ್ಟ ನಂತರ ಕುಟುಂಬ ಕಂಗೆಟ್ಟಿತ್ತು. ವಾರ್ಷಿಕ ಶುಲ್ಕವಾದ 1 ಲಕ್ಷ ರೂ. ಪಾವತಿಸುವುದು ಆಕೆಯ ತಾಯಿಗೆ ಅಸಾಧ್ಯವಾದ ಮಾತಾಗಿತ್ತು. ಆಕೆಗೆ ಅಲ್ಪಸ್ವಲ್ಪ ಸಹಾಯ ಮಾಡುತ್ತಿದ್ದ ಆಕೆಯ ಮಾಲಕನ ಸಾವಿನಿಂದಾಗಿ ಕುಟುಂಬ ಮತ್ತಷ್ಟು ತೊಂದರೆಗೀಡಾಗಿತ್ತು.
ಸತ್ಯಾ ಅವರ ಕುಟುಂಬದ ಬಡತನದ ಬಗ್ಗೆ ತಿಳಿದಿದ್ದ ಕಾಲೇಜು ಆಡಳಿತ ಶುಲ್ಕದಲ್ಲಿ ರೂ 20,000 ವಿನಾಯಿತಿ ನೀಡಿದ್ದರೂ ಕುಟುಂಬ ಬಾಕಿ ಮೊತ್ತವನ್ನು ಭರಿಸುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಸತ್ಯಾ ತಾಯಿ ಮಹಲ್ ಸಮಿತಿಯಿಂದ ಸಹಾಯ ಕೋರಿದ್ದಳು. ಕುಟುಂಬದ ಪರಿಸ್ಥಿತಿಯನ್ನು ಅರಿತಿದ್ದ ಸಮಿತಿ ಆಕೆಯ ಮನವಿಗೆ ಸ್ಪಂದಿಸಿ ಆಕೆಯ ಕಾಲೇಜು ಶುಲ್ಕವನ್ನು ಪಾವತಿಸಿ ಔದಾರ್ಯತೆ ಮೆರೆದಿದೆ.
‘‘ಇದನ್ನು ಪ್ರಚಾರಕ್ಕಾಗಿ ನಡೆಸಿಲ್ಲ, ಧನಸಹಾಯ ಮಾಡಿದ ವ್ಯಕ್ತಿ ತಮ್ಮ ಹೆಸರನ್ನು ಬಹಿರಂಗಗೊಳಿಸದಂತೆ ಕೇಳಿಕೊಂಡಿದ್ದಾರೆ’’ ಎಂದು ಸಮಿತಿಯ ಕಾರ್ಯದರ್ಶಿ ಮೊಯ್ದಿ ಹೇಳುತ್ತಾರೆ.







