ಸಿದ್ದರಾಮಯ್ಯ ವಿರುದ್ಧ ಗೆದ್ದ ಜಿ.ಟಿ.ದೇವೇಗೌಡ ಹೇಳಿದ್ದೇನು ?

ಮೈಸೂರು,ಮೇ.15: ಚಾಮುಂಡೇಶ್ವರಿ ಕ್ಷೇತ್ರದ ಜನತೆ ಸಿದ್ದರಾಮಯ್ಯ ಅವರ ದುರಹಂಕಾರ ದರ್ಪಕ್ಕೆ ಅಂತ್ಯ ಹಾಡಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ವಿಜಯಿ ಆಭ್ಯರ್ಥಿ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಪಡುವಾರಹಳ್ಳಿಯ ನೂತನ ಮಹಾರಾಣಿ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಮಂಗಳವಾರ ತಮ್ಮ ಗೆಲುವಿನ ಸೂಚನೆ ಅರಿತು ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಸಿದ್ದರಾಮಯ್ಯ ಒಬ್ಬ ಮುಖ್ಯಮಂತ್ರಿಯಾಗಿ ಈ ಮಟ್ಟಕ್ಕೆ ಸೋಲಬಾರದಿತ್ತು. ನಾನು ಮತ್ತು ಅವರು ಒಟ್ಟಿಗೆ ರಾಜಕೀಯ ಮಾಡಿದವರು. ನಾನು ಅವರಿಗಾಗಿ ಸಾಕಷ್ಟು ದುಡಿದಿದ್ದೇನೆ. ನಾಲ್ಕು ಬಾರಿ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದಿದ್ದು, ಅದರಲ್ಲಿ ನನ್ನ ಶ್ರಮವೂ ಪ್ರಮುಖವಾಗಿತ್ತು. ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಕನಸು ಕಂಡಿದ್ದವನು ನಾನು. ಅವರು ಮೊದಲ ಬಾರಿ 1983ರಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದ ದಿನದಿಂದ 1994ರ ವರೆಗೆ ಅವರಗಾಗಿ ಸಾಕಷ್ಟು ಶ್ರಮ ಪಟ್ಟಿದ್ದೇನೆ. ಅವರಿಗೆ ಬೆನ್ನೆಲುಬಾಗಿ ನಿಂತೆ. ಆದರೆ ಅವರು ನಾನು ಮಾಡಿದ ಸೇವೆಗೆ ಕೃತಜ್ಞತೆ ತೋರಲಿಲ್ಲ ಎಂದು ಕಿಡಿಕಾರಿದರು.
ಹಿರಿಯರು ಕಿರಿಯರು ಎನ್ನದೆ ಸಿದ್ದರಾಮಯ್ಯರವರು, ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ ಅವರ ಬಗ್ಗೆ ಏಕವಚನದಲ್ಲಿ ತುಚ್ಚವಾಗಿ ಮಾತನಾಡಿದರು. ಇದನ್ನು ಸಹಿಸದ ಜನ ಅವರಿಗೆ ತಕ್ಕಪಾಠ ಕಲಿಸಿದ್ದಾರೆ. ಇಷ್ಟೊಂದು ಹೀನಾಯ ಸ್ಥಿತಿ ಅವರಿಗೆ ಬರಬಾರದಿತ್ತು ಎಂದು ಹೇಳಿದರು.
ಜೆಡಿಎಸ್ ಮತ್ತು ಬಿಜೆಪಿ ಒಳ ಒಪ್ಪಂದದಿಂದ ನಿಮಗೆ ಜಯ ಲಭಿಸಿದೆಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಜನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದು ಬಯಸಿದ್ದರು, ಜೊತೆಗೆ ನಾನು ಕ್ಷೇತ್ರದ ಜನರ ಜೊತೆ ಇಟ್ಟುಕೊಂಡಿದ್ದ ಒಡನಾಟ ನನ್ನ ಗೆಲುವಿಗೆ ಸಹಕಾರಿಯಾಯಿತು ಎಂದು ಹೇಳಿದರು.
ಇದೇ ವೇಳೆ ನನ್ನ ಮೇಲೆ ವಿಶ್ವಾಸವಿಟ್ಟು ಇಷ್ಟೊಂದು ಬಾರಿ ಅಂತರದಿಂದ ಗೆಲ್ಲಿಸಿದ ಚಾಮುಂಡೇಶ್ವರಿ ಕ್ಷೇತ್ರದ ಜನತೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು.







