ಉಡುಪಿ: ನಿಷೇಧಾಜ್ಞೆ ನಡುವೆಯೂ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಉಡುಪಿ, ಮೇ 15: ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರವಾಗಿರುವ ಕುಂಜಿಬೆಟ್ಟು ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆಯ ಸಮೀಪದಲ್ಲಿರುವ ಎಂಜಿಎಂ ಕಾಲೇಜಿನ ಮೈದಾನದಲ್ಲಿ ಬಿಜೆಪಿ ಕಾರ್ಯ ಕರ್ತರು ನಿಷೇಧಾಜ್ಞೆಯ ಮಧ್ಯೆಯೂ ಸಂಭ್ರಮಾಚರಣೆ ನಡೆಸಿದರು.
ಜಿಲ್ಲೆಯ ಎಲ್ಲ ಐದು ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸುತಿದ್ದಂತೆ ಮತ ಎಣಿಕಾ ಕೇಂದ್ರದ ಸಮೀಪ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಪಕ್ಷದ ಧ್ವಜ, ಕೇಸರಿ ಧ್ವಜ, ಮೋದಿ ಭಾವಚಿತ್ರಗಳನ್ನು ಹಿಡಿದುಕೊಂಡು ಮೋದಿ ಮೋದಿ ಘೋಷಣೆಗಳನ್ನು ಕೂಗುತ್ತ ಹರ್ಷ ವ್ಯಕ್ತಪಡಿ ಸಿದರು. ಬ್ಯಾಂಡ್ ಬಾರಿಸಿ ಪಟಾಕಿ ಸಿಡಿಸಿ ಹೆಜ್ಜೆ ಹಾಕಿ ಕುಣಿದರು.
ಕಾರ್ಯಕರ್ತರ ಮಧ್ಯೆ ಆಗಮಿಸಿದ ಕಾರ್ಕಳ ಶಾಸಕ ಸುನೀಲ್ ಕುಮಾರ್, ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಕಾರ್ಯಕರ್ತರು ಮೇಲಕ್ಕೆ ಎತ್ತಿ ಸಂಭ್ರಮಿಸಿದರು. ಇದೇ ವೇಳೆ ಸುನೀಲ್ ಕುಮಾರ್ ವಿಶೇಷ ಮಗುವೊಂದನ್ನು ತನ್ನ ಜೊತೆ ಕೂರಿಸಿ ಮುದ್ದಾಡಿದರು.
ಈ ಮಧ್ಯೆ ಮೈದಾನಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಹದ್ದು ಮೀರಿ ವರ್ತಿಸ ದಂತೆ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು. ಆದರೂ ಕಾರ್ಯ ಕರ್ತರು ತಮ್ಮ ವಿಜಯೋತ್ಸವನ್ನು ಮುಂದುವರೆಸಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಭಧ್ರತೆಯನ್ನು ಒದಗಿಸಲಾಗಿತ್ತು.
ಹಾಲಾಡಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ
ಮತ ಎಣಿಕೆ ಕೇಂದ್ರದ ಬಳಿಯ ಎಂಜಿಎಂ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಹಾಲಾಡಿ ಶ್ರೀನಿವಾಸ ಶೆಟ್ಟಿ ಭಾರೀ ಮುನ್ನಡೆ ಸಾಧಿಸುತ್ತಿದ್ದಂತೆ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಸಂಭ್ರಮ ಆಚರಿಸಿದರು.







