ಫಲಿತಾಂಶ ತಡೆಹಿಡಿಯಲು ಎಸ್‍ಡಿಪಿಐ ಅಭ್ಯರ್ಥಿ ಅಬ್ದುಲ್ ಮಜೀದ್ ಚುನಾವಣಾಧಿಕಾರಿಗೆ ಮನವಿ
ಇವಿಎಂ ದುರುಪಯೋಗದ ಬಗ್ಗೆ ಸಂಶಯ

ಮೈಸೂರು,ಮೇ.15: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವು ಇಂದು ಪ್ರಕಟಗೊಂಡಿದ್ದು, ಮೈಸೂರು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಫಲಿತಾಂಶದಲ್ಲಿ ಇವಿಎಂ ದುರುಪಯೋಗದ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಫಲಿತಾಂಶವನ್ನು ತಡೆಹಿಡಿಯುವಂತೆ ಮತ್ತು ವಿ.ವಿ. ಪ್ಯಾಟ್ ನ್ನು ಮರು ಎಣಿಕೆ ಮಾಡುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ) ಅಭ್ಯರ್ಥಿ ಅಬ್ದುಲ್ ಮಜೀದ್ ನರಸಿಂಹರಾಜ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ ಉಲ್ಲೇಖಿಸಿದಂತೆ, 'ಇಂದು ನಡೆದ ಚುನಾವಣಾ ಮತ ಎಣಿಕೆಯ ಪ್ರಕಾರ ನಮೂನೆ 20ರಲ್ಲಿ ನಮೂದಿಸಿದಂತೆ 139ಎ ಪೋಲಿಂಗ್ ಸ್ಟೇಷನ್ ಕ್ರಮ ಸಂಖ್ಯೆ 5ರಲ್ಲಿ ನಮ್ಮ ಪಕ್ಷಕ್ಕೆ ಶೂನ್ಯ (0) ಮತಗಳು ಬಂದಿರುವುದು ಸಂಶಯಕ್ಕೆ ಎಡೆ ಮಾಡಿದ್ದು, ನಮ್ಮ ಕಾರ್ಯಕರ್ತರು ಸದರಿ ಬೂತ್ ನಲ್ಲಿ ಮತ ಚಲಾವಣೆ ಮಾಡಿರುವ ಬಗ್ಗೆ ದೃಢೀಕರಿಸಿರುತ್ತಾರೆ. ಮಾತ್ರವಲ್ಲದೆ ಇತರ ಬೂತ್ ಗಳಲ್ಲೂ ಚಲಾವಣೆಯಾದ ಮತಗಳ ಬಗ್ಗೆ ಮತ್ತು ಇವಿಎಂ ದುರುಪಯೋಗಪಡಿಸಿರುವ ಬಗ್ಗೆ ಸಂಶಯವಿದ್ದು, ಹಾಗಾಗಿ ಇಂದು ನಡೆದ 218-ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯ ಎಲ್ಲಾ ವಿ.ವಿ. ಪ್ಯಾಟ್ ಅನ್ನು ಮರು ಎಣಿಕೆ ಮಾಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ. ಅಲ್ಲಿಯವರೆಗೆ ಪ್ರಕಟಿಸಲಾಗಿರುವ ಫಲಿತಾಂಶವನ್ನು ತಡೆ ಹಿಡಿಯಬೇಕೆಂದು ಅಬ್ದುಲ್ ಮಜೀದ್ ಚುನಾವಣಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.





